ರಾಜ್ಯದಲ್ಲಿ ಭೂಮಿಯ ಮಾರ್ಗಸೂಚಿ ದರದಲ್ಲಿರುವ ಅವ್ಯವಸ್ಥೆ ಸರಿಪಡಿಸಲು ಸರ್ಕಾರ ಮುಂದಾಗಿದ್ದು, ವೈಜ್ಞಾನಿಕವಾಗಿ ಮಾರ್ಗಸೂಚಿ ದರ ನಿಗದಿಗೆ ತೀರ್ಮಾನಿಸಿದೆ.
ನೋಂದಣಿಯಲ್ಲಿ ಆಗುತ್ತಿರುವ ಅಕ್ರಮ ಸಂಪೂರ್ಣ ತಡೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅನೇಕ ಕಡೆ ಅಕ್ಕಪಕ್ಕದ ಆಸ್ತಿಗಳಿಗೆ ಮಾರ್ಗಸೂಚಿ ದರದಲ್ಲಿ ವ್ಯತ್ಯಾಸವಿದೆ. ರಾಜ್ಯದ ಶೇಕಡ 50ಕ್ಕೂ ಹೆಚ್ಚು ಪ್ರಮಾಣದ ಸ್ಥಿರಾಸ್ತಿ ಮಾರ್ಗಸೂಚಿ ದರ ವ್ಯಾಪ್ತಿಗಿಲ್ಲ. ಮಾರ್ಗಸೂಚಿ ದರ ನಿಗದಿ ಇಲ್ಲದ ಕಾರಣ ಬೇಕಾಬಿಟ್ಟಿ ನೋಂದಣಿ ಆಗುತ್ತಿವೆ. ರಸ್ತೆ ಅಕ್ಕಪಕ್ಕದ ಆಸ್ತಿಗಳ ಮಾರ್ಗಸೂಚಿ ದರದಲ್ಲಿಯೂ ವ್ಯತ್ಯಾಸವಿದ್ದು, ಫೆಬ್ರವರಿ ಮೊದಲ ವಾರ ವೈಜ್ಞಾನಿಕ ದರ ನಿಗದಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ.
ಮಾರ್ಗಸೂಚಿ ದರದ ವ್ಯಾಪ್ತಿಗೆ ಎಲ್ಲಾ ಆಸ್ತಿ ಬರುವಂತೆ ಮಾಡುವುದು, ನಗರ ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿ ಒಂದು ಕಿಲೋಮೀಟರ್ ವ್ಯಾಪ್ತಿಗೆ ಒಂದು ದರ ನಿಗದಿ, 2 ರಿಂದ 5 ಕಿಮೀ ವ್ಯಾಪ್ತಿಗೆ ಪ್ರತ್ಯೇಕ ದರ ನಿಗದಿ, ಗ್ರಾಮೀಣ ಪ್ರದೇಶದಲ್ಲಿನ ಭೂಮಿ ಗಮನಿಸಿ ಬೆಲೆ ನಿರ್ಧಾರ, ಮಾರುಕಟ್ಟೆಯ ಬೆಲೆ ಮೂಲ ಬೆಲೆ ಗಮನಿಸಿ ಮಾರ್ಗಸೂಚಿ ದರ ನಿಗದಿ ಮಾಡಲಾಗುತ್ತದೆ. ವೈಜ್ಞಾನಿಕವಾಗಿ ಮಾರ್ಗಸೂಚಿ ದರ ಪರಿಷ್ಕರಣೆಯಾಗುವುದರಿಂದ ಆದಾಯ ಸಂಗ್ರಹಣೆಗೆ ಅನುಕೂಲವಾಗುತ್ತದೆ. ಆಸ್ತಿಗಳು ಮಾರ್ಗಸೂಚಿ ಬೆಲೆಯ ವ್ಯಾಪ್ತಿಗೆ ಒಳಪಡಲಿದ್ದು, ಬೇಕಾಬಿಟ್ಟಿ ನೊಂದಣಿ ಸಾಧ್ಯವಾಗುವುದಿಲ್ಲ. ಸೋರಿಕೆ ತಡೆಗಟ್ಟಬಹುದಾಗಿದೆ ಎನ್ನಲಾಗಿದೆ.