ಬ್ಯಾಂಕ್ ಮುಳುಗಿದರೆ ನಮ್ಮ ಗತಿ ಏನು ಎಂಬ ಆತಂಕಗೊಳ್ಳುವ ಠೇವಣಿದಾರರಿಗೆ ಕೇಂದ್ರ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಲು ಮುಂದಾಗಿದೆ. 2020 ರಲ್ಲಿ ಠೇವಣಿಗಳ ವಿಮಾ ರಕ್ಷಣೆಯನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದ್ದ ಸರ್ಕಾರವು ಇದೀಗ ಬ್ಯಾಂಕ್ ಠೇವಣಿಗಳ ವಿಮಾ ರಕ್ಷಣೆಯನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಸಕ್ರಿಯವಾಗಿ ಪರಿಗಣಿಸುತ್ತಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಇತ್ತೀಚೆಗೆ ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಅನ್ನು RBI ನಿಯಂತ್ರಣದಲ್ಲಿಟ್ಟ ನಂತರ ಈ ಬೆಳವಣಿಗೆ ಕಂಡುಬಂದಿದೆ.
ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ. ನಾಗರಾಜು ಅವರು, ಠೇವಣಿ ವಿಮೆಯನ್ನು ಹೆಚ್ಚಿಸುವ ಪ್ರಸ್ತಾಪವು ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ. ಸರ್ಕಾರ ಅನುಮೋದಿಸಿದ ತಕ್ಷಣ ಅದನ್ನು ತಿಳಿಸಲಾಗುವುದು ಎಂದಿದ್ದಾರೆ.
ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್, ಸಹಕಾರ ಬ್ಯಾಂಕಿಂಗ್ ವಲಯವು RBI ಯ ಕಣ್ಗಾವಲಿನಲ್ಲಿ ಉತ್ತಮವಾಗಿ ನಿಯಂತ್ರಿಸಲ್ಪಡುತ್ತದೆ ಮತ್ತು ಈ ವಲಯದ ಒಟ್ಟಾರೆ ಆರೋಗ್ಯವು ಬಲವಾಗಿದೆ ಎಂದು ವಿವರಿಸಿದ್ದಾರೆ. ಒಂದು ಘಟಕದಲ್ಲಿನ ಬಿಕ್ಕಟ್ಟು ಇಡೀ ವಲಯದ ಸ್ಥಿರತೆಯ ಬಗ್ಗೆ ಸಂದೇಹಗಳಿಗೆ ಕಾರಣವಾಗಬಾರದು ಎಂದು ಅವರು ಒತ್ತಿ ಹೇಳಿದರು. ದೋಷಪೂರಿತ ಘಟಕಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಯಂತ್ರಕರ ಪಾತ್ರ ಎಂದು ಅವರು ಹೇಳಿದರು. 2019 PMC ಬ್ಯಾಂಕ್ ಬಿಕ್ಕಟ್ಟಿನ ನಂತರ ಸರ್ಕಾರವು 2020 ರಲ್ಲಿ ಠೇವಣಿಗಳ ವಿಮಾ ರಕ್ಷಣೆಯನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿತ್ತು.