
ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ಹೊಸ ನಿಯಮ ಜಾರಿಗೆ ಸರ್ಕಾರ ಮುಂದಾಗಿದೆ. ಅಬಕಾರಿ ಇಲಾಖೆ ಹುದ್ದೆಗಳನ್ನು ಕಾರ್ಯನಿರ್ವಾಹಕ ಮತ್ತು ಕಾರ್ಯನಿರ್ವಾಹಕೇತರ ಎಂದು ವಿಂಗಡಿಸಲಾಗಿದೆ.
ಅಬಕಾರಿ ಇನ್ ಸ್ಪೆಕ್ಟರ್, ಸಬ್ ಇನ್ ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್ ಮತ್ತು ಕಾನ್ಸ್ಟೇಬಲ್ ಗಳ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಮಾಡಲು ಹಾಗೂ ಅಧಿಕಾರಿಗಳ ಕಡ್ಡಾಯ ವರ್ಗಾವಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಇದಕ್ಕಾಗಿ ಆರ್ಥಿಕ ಇಲಾಖೆಯು(ಅಬಕಾರಿ) ಕರ್ನಾಟಕ ನಾಗರೀಕ ಸೇವೆಗಳ(ಅಬಕಾರಿ ಇಲಾಖೆಯ ವರ್ಗಾವಣೆ) ನಿಯಮಗಳು -2025 ಸಿದ್ಧಪಡಿಸಿದ್ದು, ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವ ಮಂಡಿಸಲಾಗುವುದು.
ಅಬಕಾರಿ ಇಲಾಖೆಯ ಆಯಕಟ್ಟಿನ ಜಾಗಗಳಿಗೆ ಅಧಿಕಾರಿಗಳ ವರ್ಗಾವಣೆಯಲ್ಲಿ ಪ್ರಭಾವ ಬೀರುವ, ಭ್ರಷ್ಟಾಚಾರ ನಡೆಯುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ವರ್ಗಾವಣೆ ನಿಯಮವನ್ನೇ ಬದಲಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ಅಬಕಾರಿ ಇಲಾಖೆಯು ಸಮವಸ್ತ್ರ ಆಧಾರಿತ ಮತ್ತು ನಿಯಂತ್ರಕ ಇಲಾಖೆಯಾಗಿದೆ. ಹೀಗಾಗಿ ಪಾರದರ್ಶಕ, ನಿರ್ದಿಷ್ಟ ಗುರಿ ಹೊಂದಿದ, ನಿಯಮಾಧಾರಿತ ವರ್ಗಾವಣೆ ಪದ್ಧತಿ ಜಾರಿಗೊಳಿಸಿದಲ್ಲಿ ಅಧಿಕಾರಿಗಳು ಮತ್ತು ನೌಕರರು ಇತರೆ ಪ್ರಭಾವಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ. ಇದರಿಂದ ಸಿಬ್ಬಂದಿ ತಮ್ಮ ಕರ್ತವ್ಯಗಳನ್ನು ನಿಭಾಯಿಸಲು ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.