ಬೆಂಗಳೂರು: ಗುತ್ತಿಗೆದಾರರಿಗೆ ಹಣ ಪಾವತಿಸುವುದರಿಂದ ಬಚಾವಾಗಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ಅವರ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗ ರಚನೆ ಮಾಡಿದೆ ಎಂದು ಗುತ್ತಿಗೆದಾರರ ಪರ ವಕೀಲರ ಆರೋಪ ಮೇಲ್ನೋಟಕ್ಕೆ ಸರಿಯಾಗಿರುವಂತೆ ಕಾಣುತ್ತಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮೆಸರ್ಸ್ ನಿಕ್ಷೇಪ ಇನ್ಫ್ರಾ ಪ್ರಾಜೆಕ್ಟ್ ಪಾಲುದಾರ ಬಿ.ಎಸ್. ಧನಂಜಯ ಸೇರಿದಂತೆ ಒಟ್ಟು 44 ಗುತ್ತಿಗೆ ಕಂಪನಿಗಳು ಮತ್ತು ಗುತ್ತಿಗೆದಾರರು, ನ್ಯಾಯಮೂರ್ತಿ ನಾಗ ಮೋಹನದಾಸ್ ಏಕವ್ಯಕ್ತಿ ಆಯೋಗ ರಚನೆ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ಅಭಿಪ್ರಾಯವ್ಯಕ್ತಪಡಿಸಿದೆ.
ಹೈಕೋರ್ಟ್ ನಿಂದ ಆದೇಶ ಹೊರಡಿಸಿ 45 ದಿನ ಕಳೆದರೂ ಆಯೋಗಕ್ಕೆ ಸಂಬಂಧಿಸಿದವರು ಏಕೆ ದಾಖಲೆ ಸಲ್ಲಿಸಿಲ್ಲ ಎಂದು ನ್ಯಾಯ ಪೀಠ ಕಿಡಿ ಕಾರಿದೆ. ಇದಕ್ಕೆ ರಾಜ್ಯ ಸರ್ಕಾರ ಸೂಕ್ತ ಉತ್ತರ ನೀಡದಿದ್ದಲ್ಲಿ ಸೂಕ್ತ ಆದೇಶ ಹೊರಡಿಸುವುದಾಗಿ ಎಚ್ಚರಿಕೆ ನೀಡಿದ್ದು, ಫೆಬ್ರವರಿ 12ಕ್ಕೆ ವಿಚಾರಣೆ ಮುಂದೂಡಲಾಗಿದೆ.