ಬೆಂಗಳೂರು: ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಹೆಸರು ಕಾಳು ಮತ್ತು ಸೂರ್ಯಕಾಂತಿ ಖರೀದಿಗೆ ಸಮ್ಮತಿ ಸೂಚಿಸಿದೆ.
ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಗುಣಮಟ್ಟದ ಹೆಸರು ಕಾಳಿಗೆ ಪ್ರತಿ ಕ್ವಿಂಟಾಲ್ ಗೆ 8682 ರೂ., ಸೂರ್ಯಕಾಂತಿಗೆ 7280 ರೂಪಾಯಿಯಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ 22,215 ಮೆಟ್ರಿಕ್ ಟನ್ ಹೆಸರು ಕಾಳು, 13,210 ಮೆಟ್ರಿಕ್ ಟನ್ ಸೂರ್ಯ ಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ತಿಳಿಸಿದ್ದಾರೆ.
ಹೆಸರು ಕಾಳು ಮತ್ತು ಸೂರ್ಯಕಾಂತಿ ಖರೀದಿಗೆ ಖರೀದಿ ಏಜೆನ್ಸಿ ನೇಮಕ ಮಾಡಿ ಆದೇಶ ಹೊರಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ,
ಹೆಸರುಕಾಳು ಮತ್ತು ಸೂರ್ಯಕಾಂತಿ ಬೆಳೆಯುವ ಪ್ರಮುಖ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಟಾಸ್ಕ್ ಫೋರ್ಸ್ ಸಭೆ ನಡೆಸಿ ಅಗತ್ಯ ಇರುವ ಕಡೆ ಖರೀದಿ ಕೇಂದ್ರಗಳನ್ನು ಗುರುತಿಸಿ ನೋಂದಣಿ ಆರಂಭಿಸಲಾಗುವುದು. ಬಳಿಕ ತ್ವರಿತ ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಶುರುವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.