ನವದೆಹಲಿ: ಕೊರೋನಾ ಲಸಿಕೆ ಪಡೆಯಲು ಆನ್ಲೈನ್ ನಲ್ಲಿ ಬುಕಿಂಗ್ ಮಾಡಬೇಕು. ಇಲ್ಲವೆ ಲಸಿಕೆ ಕೇಂದ್ರಕ್ಕೆ ತೆರಳಿ ನೋಂದಾಯಿಸಿ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಇದರಿಂದ ಗ್ರಾಮಾಂತರ ಪ್ರದೇಶದ ಜನರಿಗೆ ತೊಂದರೆಯಾಗಿದೆ.
ವ್ಯಾಕ್ಸಿನೇಷನ್ ಡ್ರೈವ್ ನಲ್ಲಿ ಗ್ರಾಮೀಣ ಜನರನ್ನು ಬದಿಗೊತ್ತಲಾಗಿದೆ ಎಂಬ ಹೇಳಿಕೆಯನ್ನು ನಿರಾಕರಿಸಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಆರ್.ಎಸ್. ಶರ್ಮ ಅವರು ಗ್ರಾಮೀಣ ಜನತೆಗೆ ಲಸಿಕೆ ಪಡೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿರುವ ಬಗ್ಗೆ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಜನ ಲಸಿಕೆ ಪಡೆಯಲು ಫೋನ್ ಮೂಲಕವೂ ಬುಕ್ಕಿಂಗ್ ಮಾಡಬಹುದು ಎಂದು ಪ್ರಕಟಿಸಿದ್ದಾರೆ. ಬುಕ್ ಮಾಡಲು 1075 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಸುಲಭವಾಗಿ ಲಸಿಕೆಗೆ ಬುಕ್ ಮಾಡಬಹುದು. ಎಲ್ಲ ಸಾಮಾನ್ಯ ಸೇವಾ ಕೇಂದ್ರಗಳು, ಸರ್ಕಾರದ ಸಹಭಾಗಿತ್ವದಲ್ಲಿನ ಸಹಾಯವಾಣಿ ಸಂಖ್ಯೆ ಬಗ್ಗೆ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಸಹಾಯ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಜನರು ಸುಲಭವಾಗಿ ಲಸಿಕೆ ಬುಕ್ಕಿಂಗ್ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
1075 ಕ್ಕೆ ಫೋನ್ ಕರೆ ಮೂಲಕ ಲಸಿಕೆ ಕಾಯ್ದಿರಿಸಬಹುದು. ಲಸಿಕೆ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವಂತೆ 1075 ಕಾಲ್ ಸೆಂಟರ್ ತೆರೆಯಲಾಗಿದ್ದು, ಅಲ್ಲಿಗೆ ಕರೆ ಮಾಡಿ ತಮ್ಮ ಲಸಿಕೆಗೆ ನೋಂದಾಯಿಸಬಹುದು ಎನ್ನಲಾಗಿದೆ.
45 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಲಸಿಕೆಗೆ ನೋಂದಾಯಿಸಿಕೊಂಡಿದ್ದಾರೆ. ಅಲ್ಲದೇ ಲಸಿಕೆ ಪಡೆಯುತ್ತಿದ್ದಾರೆ ಎಂಬುದು ಸಾಕಷ್ಟು ಜನ ಲಸಿಕೆ ಪಡೆದುಕೊಳ್ಳುತ್ತಿರುವುದಕ್ಕೆ ಪುರಾವೆಯಾಗಿದೆ.
ಇನ್ನು 18 ರಿಂದ 44 ವರ್ಷ ವಯಸ್ಸಿನವರು ಲಸಿಕೆ ಪಡೆಯಲು ಲಸಿಕೆ ಕಡಿಮೆ ಇರುವುದರಿಂದ ಸಮಸ್ಯೆಯಾಗಿದೆ. ಇದು ತಾತ್ಕಾಲಿಕವಷ್ಟೇ ಎಂದು ತಿಳಿಸಿದ್ದಾರೆ. ವ್ಯಾಕ್ಸಿನೇಷನ್ ಡ್ರೈವ್ ಪಾರದರ್ಶಕವಾಗಿದೆ. ವಿವಿಐಪಿಯಾಗಿರಲಿ, ಸಾಮಾನ್ಯ ಪ್ರಜೆಯಾಗಿರಲಿ ಯಾರಿಗೂ ಯಾವುದೇ ಆದ್ಯತೆ ನೀಡುತ್ತಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಜನವರಿ 16 ರಂದು ವ್ಯಾಕ್ಸಿನೇಷನ್ ಡ್ರೈವ್ ಅನ್ನು ಮೊದಲ ಹಂತದಲ್ಲಿ ಪ್ರಾರಂಭಿಸಲಾಯಿತು. ಆರೋಗ್ಯ ಮತ್ತು ಮುಂಚೂಣಿ ಕಾರ್ಮಿಕರಿಗೆ ಲಸಿಕೆ ನೀಡಲಾಯಿತು. 2021 ರ ಮಾರ್ಚ್ 1 ರಂದು 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಭಾರತೀಯರಿಗೆ ಲಸಿಕೆ ನೀಡಿಕೆ ಶುರುವಾಯಿತು. ಏಪ್ರಿಲ್ 1 ರಂದು 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಯಿತು. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.