ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಕ್ಫ್ ವಿವಾದ, ಮತಾಂತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿವಿಧ ಮಠಗಳ ಮಠಾಧೀಶರ ನಿಯೋಗದಿಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ವಿವಿ ಪುರಂನ ವಾಸವಿ ವಿದ್ಯಾನಿಕೇತನ ಸಭಂಗಣದಲ್ಲಿ ನಡೆದ ಸಂತ ಮಾರ್ಗದರ್ಶಕ ಮಂಡಳಿ ಸಮಾವೇಶದಲ್ಲಿ ಮತಾಂತರ, ವಕ್ಫ್ ವಿವಾದ, ಮಠ ಮಂದಿರಗಳ ಆಸ್ತಿ ರಕ್ಷಣೆಗೆ ಸಂಬಂಧಿಸಿದಂತೆ ಕೈಗೊಂಡ ನಿರ್ಣಯಗಳ ಸಂಬಂಧ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಮಠಾಧೀಶರು ಒತ್ತಾಯಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಅಂತರಾಷ್ಟ್ರೀಯ ಅಧ್ಯಕ್ಷ ಡಾ. ಅಲೋಕ್ ಕುಮಾರ್, ಪೇಜಾವರ ಮಠದ ಪೀಠಾಧ್ಯಕ್ಷ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಹೊಸಕೋಟೆ ಚಿಂತಾಮಣಿ ಮಠದ ಶಿವಾನಂದ ಭಾರತಿ ಸ್ವಾಮೀಜಿ, ಚಿತ್ತಾಪುರದ ಸವಿತಾನಂದ ಸ್ವಾಮೀಜಿ, ಸಿಂದಗಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಹೊನ್ನಾವರದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.
ವಕ್ಫ್ ಹೆಸರಿನಲ್ಲಿ ಇಸ್ಲಾಮೀಕರಣ ಮಾಡುತ್ತಿರುವುದನ್ನು ತಡೆಯಲು ನಿರಂತರ ಹೋರಾಟ ರೂಪಿಸಿ ಕೇಂದ್ರ ಸರ್ಕಾರ ಕಾಯ್ದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿ ಮಸೂದೆಯನ್ನು ಸಂಪೂರ್ಣವಾಗಿ ಬೆಂಬಲಿಸುವುದು, ವಕ್ಫ್ ಹೆಸರಿನಲ್ಲಿ ರೈತರಿಗೆ ನೀಡಿದ ನೋಟಿಸ್ ಹಿಂಪಡೆದು ರೈತರ ಜಮೀನು ವಾಪಸ್ ಕೊಡುವಂತೆ ಹೋರಾಟದ ಮೂಲಕ ಸರ್ಕಾರವನ್ನು ಒತ್ತಾಯಿಸುವುದು, ವಕ್ಫ್ ಹಗರಣದ ತನಿಖೆ ನಡೆಸಿ ರಾಜ್ಯದಲ್ಲಿನ ಸಾಮರಸ್ಯ ಕೆಡಲು ಕಾರಣರಾದ ಎಲ್ಲಾ ಅಧಿಕಾರಿಗಳು, ರಾಜಕಾರಣಿಗಳು, ಸಚಿವರನ್ನು ತನಿಖೆಗೆ ಒಳಪಡಿಸುವಂತೆ ಹೋರಾಟ ನಡೆಸಲಾಗುವುದು ಎಂದು ಸಂತ ಸಮಾವೇಶ ಎಚ್ಚರಿಸಿದೆ.
ರಾಜ್ಯ ಸರ್ಕಾರ ಇತ್ತೀಚೆಗೆ 2750 ಎಕರೆ ಸರ್ಕಾರಿ ಭೂಮಿಯನ್ನು ಖಬರ್ ಸ್ಥಾನದ ಹೆಸರಲ್ಲಿ ವಕ್ಫ್ ಗೆ ಹಸ್ತಾಂತರಿಸಲು ನೀಡಿರುವ ಆದೇಶ ರದ್ದುಗೊಳಿಸಬೇಕು. ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗಿದೆ.