ಹಾಸನ ಅಂದಕೂಡಲೇ ನಿಮಗೆ ಏನು ನೆನಪಾಗುತ್ತೆ..? ಸಕಲೇಶಪುರ, ಬಿಸಿಲೆ ಘಾಟ್, ಹಾಸನಾಂಬ ದೇವಾಲಯ ಅಲ್ಲವೇ..? ಆದರೆ ಎಂದಾದರೂ ಹಾಸನಕ್ಕೆ ಹೋದ ವೇಳೆ ಗೊರೂರು ಅಣೆಕಟ್ಟಿನ ಕಡೆ ಮುಖ ಮಾಡಿದ್ದೀರೇ,.? ಮಾಡಿಲ್ಲ ಅಂದರೆ ಈ ಸ್ಥಳವನ್ನೂ ನಿಮ್ಮ ಲಿಸ್ಟ್ಗೆ ಸೇರಿಸಿಕೊಂಡು ಬಿಡಿ.
ಜೀವ ನದಿ ಕಾವೇರಿಯ ಉಪನದಿಗಳಲ್ಲಿ ಹೇಮಾವತಿ ನದಿ ಕೂಡ ಒಂದು. ಈ ನದಿಗೆ ಹಾಸನ ಜಿಲ್ಲೆಯ ಗೂರೂರಿನಲ್ಲಿ ಕಟ್ಟಲಾಗಿರುವ ಅಣೆಕಟ್ಟೆಯೇ ಗೊರೂರು – ಹೇಮಾವತಿ ಜಲಾಶಯ. ಮಳೆಗಾಲದಲ್ಲಂತೂ ಈ ಅಣೆಕಟ್ಟಿನ ಸೌಂದರ್ಯವನ್ನ ನೋಡೋದೇ ಒಂದು ಮಜಾ.
ಮಳೆಗಾಲದ ಸಂದರ್ಭದಲ್ಲಿ ಎಲ್ಲಾ ಕ್ರೆಸ್ಟ್ ಗೇಟ್ಗಳಿಂದ ನೀರನ್ನ ಬಿಡಲಾಗುತ್ತೆ. ಅದನ್ನ ಕಣ್ತುಂಬಿಕೊಳ್ಳೋದೇ ಮಹದಾನಂದ. ಈ ಜಲಾಶಯ ಹಾಸನ ಪಟ್ಟಣದಿಂದ ಕೇವಲ 24 ಕಿಲೋಮೀಟರ್ ದೂರದಲ್ಲಿದೆ. ಸಾಧ್ಯವಾದರೆ ಮಳೆಗಾಲದ ಸಂದರ್ಭದಲ್ಲಿ ಈ ಅಣೆಕಟ್ಟಿಗೆ ಒಮ್ಮೆ ಭೇಟಿ ಕೊಡಿ.