ಭಾರತದಲ್ಲಿ ಅತ್ಯಂತ ಸಂಭ್ರಮದಿಂದ ನಡೆಯುವ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ದೀಪಾವಳಿಯಂದು ಎಲ್ಲರೂ ಹೊಸ ಬಟ್ಟೆ ತೊಟ್ಟು ದೀಪ, ಪಟಾಕಿಗಳನ್ನು ಹಚ್ಚಿ ಸಡಗರದಿಂದ ಹಬ್ಬ ಆಚರಣೆ ಮಾಡುತ್ತಾರೆ. ಆದರೆ ತಮಿಳುನಾಡಿನ ಗುಮತಾಪುರ ಹಳ್ಳಿಯ ಜನರು ಅರೆಬೆತ್ತಲೆಯಾಗಿ ಸಗಣಿಯಲ್ಲಿ ಹೊಡೆದಾಡಿ ದೀಪಾವಳಿ ಆಚರಿಸುತ್ತಾರೆ.
ಹೌದು. ಇದನ್ನು ಗೊರಹಬ್ಬಾ ಉತ್ಸವ ಎಂದು ಕರೆಯಲಾಗುತ್ತದೆ. ಗುಮತಾಪುರ ಹಳ್ಳಿಯ ಜನರು ಈ ಹಬ್ಬವನ್ನು ಬಹಳ ವರ್ಷದಿಂದ ನಡೆಸಿಕೊಂಡು ಬಂದಿದ್ದಾರೆ. ಹಬ್ಬದ ದಿನ ಬೆಳಿಗ್ಗೆ ಊರಿನ ಜನರೆಲ್ಲ ವಾಹನಗಳಲ್ಲಿ ಸಗಣಿಯನ್ನು ಸಂಗ್ರಹಿಸಿ ದೇವಸ್ಥಾನದ ಬಳಿ ತೆಗೆದುಕೊಂಡು ಹೋಗುತ್ತಾರೆ. ನಂತರ ಅಲ್ಲಿನ ಪೂಜಾರಿಗಳು ಸಗಣಿಗೆ ಪೂಜೆಯನ್ನು ನೆರವೇರಿಸುತ್ತಾರೆ. ಪೂಜೆ ಮುಗಿದ ನಂತರ ಅಲ್ಲಿ ನೆರೆದ ಎಲ್ಲರೂ ಸಗಣಿಯ ಉಂಡೆಗಳನ್ನು ಮಾಡಿ ಪರಸ್ಪರ ಒಬ್ಬರಿಗೊಬ್ಬರು ಅದರಿಂದಲೇ ಹೊಡೆದಾಡಿಕೊಳ್ಳುತ್ತಾರೆ.
ಹೀಗೆ ಸಗಣಿಯಿಂದ ಹೊಡೆದಾಡುವುದರಿಂದ ನಮ್ಮಲ್ಲಿರುವ ಅನೇಕ ಖಾಯಿಲೆಗಳು ದೂರವಾಗುತ್ತವೆ ಎಂಬುದು ಅಲ್ಲಿನವರ ನಂಬಿಕೆ. ಈ ಉತ್ಸವವನ್ನು ನೋಡಲು ದೂರ ದೂರದಿಂದ ಜನರು ಬರುತ್ತಾರೆ. ಪರಸ್ಪರ ಸಗಣಿ ಎರಚಿದ ಮೇಲೆಯೇ ಅವರಿಗೆ ದೀಪಾವಳಿ ಮುಗಿಯುತ್ತದೆ.