ಗೋರಖ್ ಪುರ: ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತನ್ನ ಸ್ನೇಹಿತರಿಂದಲೂ ಹಣ ಪಡೆದು ಪದೇ ಪದೇ ಅತ್ಯಾಚಾರ ಮಾಡಲು ಕುಮ್ಮಕ್ಕು ನೀಡಿದ್ದಾನೆ. ಸಂತ್ರಸ್ತೆ ಆರು ತಿಂಗಳ ಕಾಲ ಸಾಮೂಹಿಕ ಅತ್ಯಾಚಾರಕ್ಕೊಳಗಾದ ನಂತರ ಸಹಾಯಕ್ಕಾಗಿ ಪೊಲೀಸರನ್ನು ಭೇಟಿಯಾಗಿದ್ದಾಳೆ.
ಮದುವೆಯಾದ ಕೆಲವೇ ದಿನಗಳಲ್ಲಿ ಹಿಂಸಾಚಾರ ಮತ್ತು ಅತ್ಯಾಚಾರದಿಂದ ಮಹಿಳೆ ನಲುಗಿದ್ದಾಳೆ. ಪತಿಯಿಂದ ನಿರಂತರವಾಗಿ ಕಿರುಕುಳಕ್ಕೆ ಒಳಗಾಗಿದ್ದಾಳೆ. ಸ್ನೇಹಿತರಿಂದ ಅತ್ಯಾಚಾರಕ್ಕೊಳಗಾದಾಗ ಪತಿ ದೃಶ್ಯಗಳನ್ನು ಚಿತ್ರೀಕರಿಸಿದ್ದ ಎಂದು ಮಹಿಳೆ ದೂರು ನೀಡಿದ್ದಾರೆ.
ಬಡ ಕುಟುಂಬದ ಯುವತಿ 2021 ರ ನವೆಂಬರ್ ನಲ್ಲಿ ಆರೋಪಿಯನ್ನು ಮದುವೆಯಾಗಿದ್ದಳು. ವರದಕ್ಷಿಣೆ ತರಲಿಲ್ಲ ಎಂದು ಆಗಾಗ ಹೊಡೆಯುತ್ತಿದ್ದ ಗಂಡ ಮದ್ಯವ್ಯಸನಿಯಾಗಿದ್ದ. ಆಗಾಗ ಕುಡಿದು ಮನೆಗೆ ಬರುತ್ತಿದ್ದು, ಮದುವೆಯಾದ ಕೆಲ ತಿಂಗಳ ಬಳಿಕ ತನ್ನ ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬರಲು ಆರಂಭಿಸಿದ್ದ. ನಂತರ ಅವನು ತನ್ನ ಸ್ನೇಹಿತರೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಲು ಒತ್ತಾಯಿಸಿದ್ದ. ಇದಕ್ಕಾಗಿ ಸ್ನೇಹಿತರಿಂದ ಹಣ, ಮದ್ಯ ಪಡೆದುಕೊಳ್ಳುತ್ತಿದ್ದ. ನಿರಾಕರಿಸಿದಾಗ ಆಕೆಯನ್ನು ಥಳಿಸಿ ಅತ್ಯಾಚಾರವೆಸಗಿದ್ದಾನೆ.
ತನ್ನ ಸ್ನೇಹಿತರನ್ನು ಪತ್ನಿ ಮೇಲೆ ಅತ್ಯಾಚಾರ ಎಸಗಲು ಮನೆಗೆ ಕರೆದುಕೊಂಡು ಬರುತ್ತಿದ್ದ. ಆರು ತಿಂಗಳ ಕಾಲ ಇದು ಮುಂದುವರೆದಿದ್ದು, ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದಾಳೆ. ಕೊನೆಗೆ ಧೈರ್ಯ ಮಾಡಿ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಲಾಗಿದೆ.