ವಿಶ್ವದಲ್ಲಿ ಆರ್ಥಿಕ ಹಿಂಜರಿತ ಈಗಾಗಲೇ ಆರಂಭವಾಗಿದೆ. ಹೀಗಾಗಿ ಐಟಿ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದ್ದು, ಈಗಾಗಲೇ ಅಮೆಜಾನ್, ಮೆಟಾ, ಸಿಸ್ಕೋ, ಟ್ವಿಟರ್ ಮೊದಲಾದ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿವೆ.
ಇದೀಗ ಅಲ್ಫಾಬೆಟ್ ಒಡೆತನದ ಗೂಗಲ್ ಸಹ ಇದೇ ಹಾದಿ ಹಿಡಿಯಲು ಮುಂದಾಗಿದ್ದು, 10000 ಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ತಿಳಿದು ಬಂದಿದೆ. ಅದಕ್ಕೆ ಪೂರ್ವ ಸಿದ್ಧತೆಯಾಗಿ ಮ್ಯಾನೇಜರ್ ಗಳಿಂದ ಉದ್ಯೋಗಿಗಳ ಕಾರ್ಯಕ್ಷಮತೆ ಕುರಿತಂತೆ ವರದಿ ಕೇಳಲಾಗಿದ್ದು ಇದನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮ್ಯಾನೇಜರ್ಗಳು ತಮ್ಮ ಕೆಳಗೆ ಕೆಲಸ ಮಾಡುವ ಉದ್ಯೋಗಿಗಳ ಕಾರ್ಯಕ್ಷಮತೆ ಕುರಿತು ಅಂಕಗಳನ್ನು ನೀಡಲಿದ್ದು, ಇದರ ಆಧಾರದ ಮೇಲೆ ವೇತನ, ಬೋನಸ್ ಮೊದಲಾದವು ನಿರ್ಧಾರವಾಗುತ್ತದೆ. ಒಂದೊಮ್ಮೆ ಉದ್ಯೋಗಿಯ ಕಾರ್ಯಕ್ಷಮತೆ ಕಳಪೆ ಎಂದು ಕಂಡು ಬಂದರೆ ಆತನನ್ನು ವಜಾಗೊಳಿಸಲಾಗುತ್ತದೆ. ಹೀಗಾಗಿ ಒಟ್ಟು ಉದ್ಯೋಗಿಗಳ ಪೈಕಿ ಶೇಕಡಾ 6ರಷ್ಟು ಅಂದರೆ 10,000 ಮಂದಿಯನ್ನು ವಜಾಗೊಳಿಸಲು ಗೂಗಲ್ ತೀರ್ಮಾನಿಸಿದೆ ಎಂದು ಹೇಳಲಾಗಿದೆ.
ಕೆಲವೇ ವಾರಗಳ ಅವಧಿಯಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದು, ಇದು ಭಾರತೀಯ ಉದ್ಯೋಗಿಗಳ ಮೇಲು ಪರಿಣಾಮ ಬೀರಿದೆ. ಆರ್ಥಿಕ ಹಿಂಜರಿತ ಇದೇ ರೀತಿ ಮುಂದುವರೆದಲ್ಲಿ ಐಟಿ ಕ್ಷೇತ್ರದ ಲಕ್ಷಾಂತರ ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.