ಬೆಂಗಳೂರು: ಗೂಗಲ್ ಹುಡುಕಾಟ ಮಾಡಿ ಅಲ್ಲಿ ನಮೂದಾಗಿರುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಯಾವುದೇ ವ್ಯಕ್ತಿ, ಅಪರಾಧಿಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಗೂಗಲ್ನಲ್ಲಿ ಹುಡುಕಾಟ ನಡೆಸಿರುವುದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಇದರ ವಿಮರ್ಶೆಗಳನ್ನು ಬಳಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅಭಿಪ್ರಾಯ ಪಟ್ಟಿದ್ದಾರೆ.
ವಂಚನೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಓಂ ಪ್ರತಾಪ್ ಸಿಂಗ್ ಎಂಬುವರಿಗೆ ಜಾಮೀನು ಮಂಜೂರು ಮಾಡುವ ಮೂಲಕ ಕೋರ್ಟ್ ಈ ತೀರ್ಪು ನೀಡಿದೆ. ಲಿಕ್ವಿಡ್ ಪ್ಯಾರಾಫಿನ್ ಪೂರೈಕೆದಾರ ಓಂ ಪ್ರತಾಪ್ ಸಿಂಗ್, ವ್ಯವಹಾರದಲ್ಲಿ ಮಹಿಳೆಯೊಬ್ಬರಿಗೆ ಮೋಸ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಹಿಳೆ ದೂರು ದಾಖಲು ಮಾಡಿದ್ದರು.
ಈತನ ಬಗ್ಗೆ ಗೂಗಲ್ನಲ್ಲಿ ಹುಡುಕಿದಾಗ ಹಿಂದೆಯೂ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಕೇಸು ದಾಖಲು ಮಾಡಿದ್ದರು. ಕೇಸು ದಾಖಲಾಗುತ್ತಿದ್ದಂತೆಯೇ ತನ್ನನ್ನು ಪೊಲೀಸರು ಬಂಧಿಸಬಹುದು ಎಂದುಕೊಂಡು ಆತ ನಿರೀಕ್ಷಣಾ ಜಾಮೀನು ಕೋರಿ ಮೊದಲಿಗೆ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ಕೇಸ್ ವಜಾ ಆಗಿತ್ತು. ಅದನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ವಕೀಲರು ಗೂಗಲ್ ವಿಷಯವನ್ನು ಪ್ರಸ್ತಾಪಿಸಿದರು. ಆಗ ನ್ಯಾಯಮೂರ್ತಿಗಳು ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿ, ಜಾಮೀನು ನೀಡದಿರಲು ಯಾವುದೇ ಸಕಾರಣ ನಮಗೆ ತೋರುತ್ತಿಲ್ಲ ಎಂದರು.