ಇದು ಡಿಜಿಟಲ್ ಯುಗ. ಜನರು, ಆನ್ಲೈನ್ ಪಾವತಿ ವಿಧಾನವನ್ನು ಹೆಚ್ಚು ಇಷ್ಟಪಡ್ತಿದ್ದಾರೆ. ಸಣ್ಣ ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ಅಂಗಡಿಗಳವರೆಗೆ ಎಲ್ಲರೂ ಈಗ ಆನ್ಲೈನ್ ಪೇಮೆಂಟ್ ಗೆ ಅವಕಾಶ ನೀಡ್ತಿದ್ದಾರೆ. ಕೆಲವೊಮ್ಮೆ ಆನ್ಲೈನ್ ಪೇಮೆಂಟ್ ಮಾಡುವ ವೇಳೆ ಅರ್ಧಕ್ಕೆ ಇಂಟರ್ನೆಟ್ ಸಂಪರ್ಕ ಕಡಿತಗೊಂಡ್ರೆ ಚಿಂತಿಸುವ ಅಗತ್ಯವಿಲ್ಲ. ಇಂಟರ್ನೆಟ್ ಇಲ್ಲದೆ ಹಣ ಪಾವತಿ ಮಾಡಬಹುದು.
ಗೂಗಲ್ ಪೇ, ಪೇಮೆಂಟ್, ಯುಪಿಐ ಮತ್ತು ಫೋನ್ ಪೇನಲ್ಲಿ ಪಾವತಿ ಮಾಡುವಾಗ ಇಂಟರ್ನೆಟ್ ಸಂಪರ್ಕದ ಕೊರತೆಯನ್ನು ಎದುರಿಸುತ್ತಿದ್ದರೆ, ಫೋನನ್ನು ಮೊದಲೇ ನೋಂದಾಯಿತ ಬ್ಯಾಂಕ್ ಖಾತೆಗೆ ಸಂಪರ್ಕಿಸಬೇಕು.
ಭಾರತದಲ್ಲಿ ನವೆಂಬರ್ 2012 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ, ಸ್ಮಾರ್ಟ್ ಫೋನ್ ಅಲ್ಲದ ಬಳಕೆದಾರರು ಸೇರಿದಂತೆ ಎಲ್ಲಾ ಮೊಬೈಲ್ ಫೋನ್ ಬಳಕೆದಾರರಿಗಾಗಿ *99# ಸೇವೆಯನ್ನು ಆರಂಭಿಸಿದೆ. ಸ್ಮಾರ್ಟ್ಫೋನ್ಗಳನ್ನು ಬಳಸುತ್ತಿರುವವರಿಗೆ, *99# ತುರ್ತು ವೈಶಿಷ್ಟ್ಯವಾಗಿ ಕಾರ್ಯ ನಿರ್ವಹಿಸಲಿದೆ. ಇಂಟರ್ನೆಟ್ ಇಲ್ಲದಿದ್ದಾಗ ಇದನ್ನು ಬಳಸಬಹುದು. ಫೀಚರ್ ಫೋನ್ ಬಳಕೆದಾರರಿಗೆ, ಯುಪಿಐ ವಹಿವಾಟುಗಳನ್ನು ಮಾಡಲು *99# ಏಕೈಕ ಮಾರ್ಗವಾಗಿದೆ.
ಎಲ್ಲಕ್ಕಿಂತ ಮೊದಲು ನೀವು ಭೀಮ್ ಅಪ್ಲಿಕೇಷನ್ ಡೌನ್ಲೋಡ್ ಮಾಡಬೇಕು. ಒಂದು ಬಾರಿ ಹೆಸರು ನೋಂದಾಯಿಸಿಕೊಳ್ಳಬೇಕು. ನೋಂದಣಿ ನಂತ್ರ ನೀವು ಇಂಟರ್ನೆಟ್ ಇಲ್ಲದೆ ಯುಪಿಐ ವಹಿವಾಟು ನಡೆಸಬಹುದು. ಬ್ಯಾಂಕ್ ಖಾತೆ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಿರುವುದು ಅನಿವಾರ್ಯವಾಗಿರುತ್ತದೆ.
ಮೊದಲು ಫೋನ್ ನ ಡಯಲ್ ಪ್ಯಾಡ್ ತೆರೆಯಬೇಕು. ನಂತ್ರ *99# ಡಯಲ್ ಮಾಡಬೇಕು. ಆಗ ಹೊಸ ಮೆನು ನಿಮಗೆ ತೋರಿಸುತ್ತದೆ. ಅದ್ರಲ್ಲಿ ಏಳು ಆಯ್ಕೆಗಳಿರುತ್ತವೆ. ಮೆನುಗಳಲ್ಲಿ ಸೆಂಡ್ ಮನಿ, ಮನಿ ರಿಸೀವ್, ಚೆಕ್ ಬ್ಯಾಲೆನ್ಸ್, ಮೈ ಪ್ರೊಫೈಲ್, ಬಾಕಿ ಇರುವ ರಿಕ್ವೆಸ್ಟ್ಗಳು, ಟ್ರಾನ್ಸಾಕ್ಷನ್ಸ್ ಮತ್ತು ಯುಪಿಐ ಪಿನ್ ಅಂತಹ ಆಯ್ಕೆ ಇರುತ್ತದೆ.
ಅಲ್ಲಿ ಸೆಂಡ್ ಮನಿ ಆಯ್ಕೆಗಾಗಿ ನಂಬರ್ 1 ಒತ್ತಬೇಕು. ಆಗ ಫೋನ್ ಸಂಖ್ಯೆ, ಯುಪಿಐ ಐಡಿ ಅಥವಾ ಖಾತೆ ಸಂಖ್ಯೆ ಮತ್ತು ಐಎಫ್ಎಸ್ಸಿ ಕೋಡ್ ಇದ್ರಲ್ಲಿ ಒಂದನ್ನು ಬಳಸಿ ಹಣ ವರ್ಗಾವಣೆ ಮಾಡಬೇಕಾಗುತ್ತದೆ. ಇದ್ರಲ್ಲಿ ಒಂದು ಆಯ್ಕೆಯನ್ನು ನೀವು ಆಯ್ದುಕೊಳ್ಳಬೇಕು. ಒಂದು ವೇಳೆ ನೀವು ಫೋನ್ ನಂಬರ್ ಆಯ್ಕೆ ಮಾಡಿಕೊಂಡಿದ್ದರೆ, ಹಣವನ್ನು ಕಳುಹಿಸಲು ಬಯಸುವ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
ಯುಪಿಐ ಐಡಿ ಆಯ್ಕೆಯನ್ನು ಆರಿಸಿದರೆ, ಅದನ್ನು ನಮೂದಿಸಬೇಕು. ನಂತ್ರ ನೀವು ಎಷ್ಟು ಹಣ ವರ್ಗಾವಣೆ ಮಾಡಬೇಕು ಎಂಬುದನ್ನು ಅಲ್ಲಿ ನಮೂದಿಸಬೇಕು. ಗೂಗಲ್ ಪೇ, ಪೇಟಿಎಂನಂತೆ ಮೊತ್ತವನ್ನು ನಮೂದಿಸಬೇಕು. ನಂತ್ರ ಯುಪಿಐ ಪಿನ್ ಸಂಖ್ಯೆ ಹಾಕಬೇಕು. ನಂತ್ರ ಕಳುಹಿಸಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಒಮ್ಮೆ ಹಣ ವರ್ಗಾವಣೆಯದ್ಮೇಲೆ, ರೆಫರೆನ್ಸ್ ಐಡಿಯೊಂದಿಗೆ ವಹಿವಾಟು ಸ್ಥಿತಿಯ ಮಾಹಿತಿ ಬರುತ್ತದೆ.