ಶಬರಿಮಲೆಗೆ ತೆರಳಿ ಅಯ್ಯಪ್ಪಸ್ವಾಮಿ ದರ್ಶನ್ ಅಪಡೆದು ವಾಪಾಸ್ ಆಗುತ್ತಿದ್ದ ಮಂಗಳೂರು ಮೂಲದ ಭಕ್ತರೊಬ್ಬರು ಗೂಗಲ್ ಮ್ಯಾಪ್ ಎಡವಟ್ಟಿನಿಂದ ಕೆಸರಿನಲ್ಲಿ ಬಿದ್ದು ಒದ್ದಾಡಿದ ಘಟನೆ ನಡೆದಿದೆ.
ಮಂಗಳೂರು ಮೂಲದ ಪರಶುರಾಮ್ ಎಂಬುವವರು ವಿಶೇಷ ಚೇತನರಾಗಿದ್ದು, ತಮ್ಮದೇ ವಿಶೇಷ ವಿನ್ಯಾಸದ ದ್ವಿಚಕ್ರವಾಹನದಲ್ಲಿ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪ ದರ್ಶನ ಮುಗಿಸಿ ವಾಪಾಸ್ ಆಗುತ್ತಿದ್ದಾಗ ಬೇಗನೇ ಮನೆಗೆ ತಲುಪಬೇಕು ಎಂದು ಗೂಗಲ್ ಮ್ಯಾಪ್ ಹಾಕಿಕೊಂಡು ಹೊರಟಿದ್ದಾರೆ. ಗೂಗಲ್ ಮ್ಯಾಪ್ ಸರಿಯಾದ ಮಾರ್ಗಬಿಟು ಅಡ್ಡ ದಾರಿ ತೋರಿಸಿದೆ. ಭಾನುವರ ಸಂಜೆ 7 ಗಂಟೆಗೆ ದಿಂಡಿಗಲ್ ಜಿಲ್ಲೆಯ ವಟ್ಟಲಕುಂದು ಪಕ್ಕದ ಎಂ.ವಾಡಿಪ್ಪತಿ ಪ್ರದೇಶ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾಗಬೇಕಿದ್ದ ಅವರಿಗೆ ಮಾರ್ಗ ತಪ್ಪಿದೆ. ಗೂಗಲ್ ಮ್ಯಾಪ್ ಸಮುದ್ರ ಕಣ್ಮಾಯಿಗೆ ತೆರಳುವ ಮಾರ್ಗ ತೋರಿದೆ. ಗೂಗಲ್ ಮ್ಯಾಪ್ ತೋರಿಸಿದಂತೆ ಸೇತುವೆ ದಾಟಿದ ಪರಶುರಾಮ್, ಕತ್ತಲಿನಲ್ಲಿ ಏಕಾಏಕಿ ಕೆಸರಿನಲ್ಲಿ ಬಿದ್ದಿದ್ದಾರೆ.
ಇದೇ ವೇಳೆ ಮಳೆ ಅಬ್ಬರ ಜೋರಾಗಿದ್ದು, ಪರಶುರಾಮ್ ಕೂಗಾಡಿದರು ಸಹಾಯಕ್ಕೆ ಯಾರೂ ಬಂದಿಲ್ಲ. ಸುಮಾರು 7 ಗಂಟೆಗಳ ಕಾಲ ಕೆಸರಿನಲ್ಲಿಯೇ ಒದ್ದಾಡಿದ್ದಾರೆ. ಬೇರೆ ದಾರಿ ಕಾಣದೇ ಕರ್ನಾಟಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸಂಬಂಧಿಕರಿಗೂ ವಿಷಯ ತಲುಪಿಸಿದ್ದಾರೆ. ಕರ್ನಾಟಕ ಪೊಲೀಸರು ತಮಿಳುನಾಡಿನ ದಿಂಡಿಗಲ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ಪರಶುರಾಮ್ ಗೆ ಸಹಾಯ ಮಾಡುವಂತೆ ಕೋರಿದ್ದಾರೆ. ದಿಂಡಿಗಲ್ ಪೊಲೀಸರು ಸಮುದ್ರ ಕಣ್ಮಾಯಿ ಪ್ರದೇಶಕ್ಕೆ ತೆರಳಿ ಪರಶುರಾಮ್ ಅವರನ್ನು ರಕ್ಷಿಸಿದ್ದಾರೆ. ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಪರಶುರಾಮ್ ಅವರನ್ನು ರಕ್ಷಿಸಲಾಗಿದೆ.