ಗೂಗಲ್ ಕಂಪನಿ ತನ್ನ ಉದ್ಯೋಗಿಗಳಿಗೆ ಶಾಕ್ ಮೇಲೆ ಶಾಕ್ ನೀಡ್ತಿದ್ದು ಸಾಮೂಹಿಕ ಉದ್ಯೋಗ ಕಡಿತದಿಂದ ರೊಚ್ಚಿಗೆದ್ದ ಸಿಬ್ಬಂದಿ ಪ್ರತಿಭಟನೆಗಿಳಿದಿದ್ದಾರೆ.
ಕಂಪನಿಯು ಇತ್ತೀಚಿಗೆ ವಜಾ ಮಾಡಿದ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಗೂಗಲ್ ಉದ್ಯೋಗಿಗಳು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಸುಮಾರು 15,000 ಸಿಬ್ಬಂದಿ ಪ್ರತಿಭಟನೆಯಲ್ಲಿ ತೊಡಗಿದ್ದರು ಎಂದು ವರದಿಯಾಗಿದೆ.
ಆಲ್ಫಾಬೆಟ್ ವರ್ಕರ್ಸ್ ಯೂನಿಯನ್ ಜನವರಿ 18 ರಂದು ಅಮೆರಿಕದಾದ್ಯಂತ ಐದು ಗೂಗಲ್ ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆ ಸಂಘಟಿಸಿತ್ತು. ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಿಂದ ನ್ಯೂಯಾರ್ಕ್‌ವರೆಗೆ ಪ್ರತಿಭಟನೆ ವಿಸ್ತರಿಸಿತು.
ಈಗಾಗಲೇ ಗೂಗಲ್ ಸಿಇಒ ಸುಂದರ್ ಪಿಚೈ ಅವರು 2024 ರಲ್ಲಿ ಇನ್ನೂ ಹೆಚ್ಚಿನ ಸಿಬ್ಬಂದಿ ವಜಾ ಪ್ರಕ್ರಿಯೆ ನಡೆಯಲಿದೆ ಎಂದಿದ್ದರು. ದೊಡ್ಡ ಆದ್ಯತೆಗಳಲ್ಲಿ ಹೂಡಿಕೆ ಮಾಡಲು ಕಠಿಣ ಆಯ್ಕೆಗಳನ್ನು ಮಾಡಬೇಕು ಎಂದು ಹೇಳಿದ್ದರು. ಗೂಗಲ್ ನ ಹಲವಾರು ವಿಭಾಗಗಳಲ್ಲಿ 1,000 ಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಮತ್ತೊಂದೆಡೆ ಕಳೆದ ವರ್ಷದಲ್ಲಿ ಸುಮಾರು 15,000 ಸಹೋದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಆಲ್ಫಾಬೆಟ್ ವರ್ಕರ್ಸ್ ಯೂನಿಯನ್ ಬಹಿರಂಗಪಡಿಸಿದೆ.
ಯೂನಿಯನ್ ಬಹಿರಂಗಪಡಿಸಿದ ಈ ವಿಷಯವು ನೌಕರರಲ್ಲಿ ಅಸಮಾಧಾನವನ್ನು ತೀವ್ರಗೊಳಿಸಿದ್ದು ಪ್ರತಿಭಟನೆಗಳನ್ನು ಸಂಘಟಿಸಲು ಪ್ರೇರೇಪಿಸಿದೆ.
ಕಂಪನಿಯ ಹಠಾತ್ ವಜಾಗೊಳಿಸುವಿಕೆಯ ಕ್ರಮಗಳಿಂದ ಉದ್ಯೋಗಿಗಳು ಭೀತಿಯಲ್ಲಿದ್ದು ಭವಿಷ್ಯದ ಆತಂಕ ಹುಟ್ಟುಹಾಕಿದೆ. ಆದರೆ ಕಂಪನಿಯ ಪ್ರಮುಖ ಆದ್ಯತೆಗಳು ಮತ್ತು ಮುಂದೆ ಇರುವ ಗಣನೀಯ ಅವಕಾಶಗಳಲ್ಲಿ ಜವಾಬ್ದಾರಿಯುತ ಹೂಡಿಕೆ ಎಂದು ಹೇಳುವ ಮೂಲಕ ಗೂಗಲ್ ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡಿದೆ.