ಕೊರೊನಾದಿಂದಾಗಿ ವಿಶ್ವದಾದ್ಯಂತ ಲಾಕ್ ಡೌನ್ ಜಾರಿಯಾಗಿತ್ತು. ಆ ಸಂದರ್ಭದಲ್ಲಿ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಘೋಷಣೆ ಮಾಡಿದ್ದವು. ಇನ್ನೂ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಮುಂದುವರೆಸಿವೆ. ಆದ್ರೆ ಕೆಲ ಕಂಪನಿಗಳು,ಉದ್ಯೋಗಿಗಳನ್ನು ವಾಪಸ್ ಕರೆಯಿಸಿಕೊಳ್ತಿವೆ. ಈ ಮಧ್ಯೆ ವರ್ಕ್ ಫ್ರಂ ಹೋಮ್ ನೀಡಿದ್ದ ಕೆಲ ಕಂಪನಿಗಳು ಉದ್ಯೋಗಿಗಳ ಸಂಬಳ ಕಡಿತ ಮಾಡ್ತಿವೆ. ಇದ್ರಲ್ಲಿ ಗೂಗಲ್ ಕೂಡ ಸೇರ್ತಿದೆ.
ರಾಯಿಟರ್ಸ್ ಪ್ರಕಾರ, ಗೂಗಲ್ ಕಂಪನಿ, ಉದ್ಯೋಗಿಗಳಿಗೆ ಎರಡು ಆಯ್ಕೆ ನೀಡಿದೆ. ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಬಹುದು. ಇಲ್ಲವೆ ಕಚೇರಿಗೆ ಬರಬಹುದು. ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳ ಸಂಬಳ, ಕಚೇರಿಗೆ ಬರುವ ಉದ್ಯೋಗಿಗಳ ಸಂಬಳಕ್ಕಿಂತ ಕಡಿಮೆಯಾಗಲಿದೆ. ಗೂಗಲ್ ಸಹ ಉದ್ಯೋಗಿಗಳಿಗೆ ಸಂಬಳದ ವ್ಯತ್ಯಾಸವನ್ನು ಲೆಕ್ಕ ಹಾಕುವಂತೆ ಕೇಳಿಕೊಂಡಿದೆ.
ಈ ಹಿಂದೆ, ಫೇಸ್ಬುಕ್ ಮತ್ತು ಟ್ವಿಟರ್ ಕೂಡ ಮನೆಯಿಂದ ಕೆಲಸ ಮಾಡುವವರ ವೇತನವನ್ನು ಕಡಿತಗೊಳಿಸಲು ನಿರ್ಧರಿಸಿತ್ತು. ಉದ್ಯೋಗಿಗಳ ಸ್ಥಳದ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತಿದೆ. ಕಚೇರಿಗೆ ಬಾರದೆ ಇರುವ ಉದ್ಯೋಗಿಗಳು ವಾಸಿಸುವ ಸ್ಥಳದ ಆಧಾರದ ಮೇಲೆ ಸಂಬಳ ನೀಡಲಾಗ್ತಿದೆ. ಈ ಮಾನದಂಡದ ಪ್ರಕಾರ ಗೂಗಲ್ ತನ್ನ ಉದ್ಯೋಗಿಗಳ ವೇತನವನ್ನು ಕೂಡ ನಿಗದಿಪಡಿಸಲಿದೆ.