ಲಕ್ನೋ: ಬಿಹಾರದಲ್ಲಿ ನಿತೀಶ್ ಕುಮಾರ್ ಬಿಜೆಪಿಯನ್ನು ಕೈ ಬಿಟ್ಟಿರುವುದನ್ನು ಸ್ವಾಗತಿಸಿದ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಉತ್ತಮ ಆರಂಭ ಎಂದು ಹೇಳಿದ್ದಾರೆ.
ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವ ನಿತೀಶ್ ಕುಮಾರ್ ಅವರ ನಿರ್ಧಾರವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸ್ವಾಗತಿಸಿದ್ದು, ಇದು ರಾಜಕೀಯ ಪಕ್ಷಗಳು ಮತ್ತು ಜನ ನಿಲುವು ತೆಗೆದುಕೊಳ್ಳುವುದಕ್ಕೆ ಒಳ್ಳೆಯ ಆರಂಭ ಎಂದು ಕರೆದಿದ್ದಾರೆ.
ಇದೊಂದು ಶುಭ ಆರಂಭ. ಇಂದು ಬಿಹಾರದಿಂದ ‘ಬಿಜೆಪಿ ಭಗಾವೋ’ ಘೋಷಣೆ ಬಂದಿದೆ. ಶೀಘ್ರದಲ್ಲೇ ವಿವಿಧ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಜನರು ಬಿಜೆಪಿ ವಿರುದ್ಧ ನಿಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಉತ್ತರ ಪ್ರದೇಶದ ಕನೌಜ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್ ಹೇಳಿದ್ದಾರೆ.
ನಿತೀಶ್ ಕುಮಾರ್ ಅಪಾರ ಅನುಭವ ಹೊಂದಿರುವ ನಾಯಕ. ಅವರ ಬಗ್ಗೆ ಏನು ಹೇಳಬಹುದು. ಅವರು ಬಿಹಾರ ಮತ್ತು ಬಿಹಾರ ರಾಜಕೀಯದ ಅಂಕಗಣಿತವನ್ನು ಚೆನ್ನಾಗಿ ತಿಳಿದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆರು ವರ್ಷಗಳಲ್ಲಿ ಎರಡನೇ ಬಾರಿಗೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಿದ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮಹಾಘಟಬಂಧನ್ ನಾಯಕರಾಗಿ ಆಯ್ಕೆಯಾದ ನಂತರ ಮತ್ತೊಮ್ಮೆ ರಾಜ್ಯದ ಉನ್ನತ ಹುದ್ದೆಗೆ ಹಕ್ಕು ಮಂಡಿಸಿದ್ದಾರೆ. 164 ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ನಾಳೆ ಪ್ರಮಾಣ ವಚನ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.