ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಖಾಲಿ ಹುದ್ದೆಗಳ ನೇಮಕಾತಿಗೆ ಹಾಗೂ ಜ್ಯೇಷ್ಠತೆ ಆಧಾರಿತ ಬಡ್ತಿ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಬದ್ಧವಾಗಿದೆ. ಹಿರಿತನದ ಆಧಾರದಲ್ಲಿ ಬಡ್ತಿ ಸಿಗದ ಮೂರು ಪ್ರಕರಣಗಳ ಕುರಿತು ಲಿಖಿತ ದೂರು ಬಂದಿದ್ದು, ಅವು ತನಿಖೆ ಹಂತದಲ್ಲಿವೆ. ಬಡ್ತಿಯಲ್ಲಿ ತಾರತಮ್ಯ, ಪಕ್ಷಪಾತ ಅಥವಾ ಉದ್ದೇಶಪೂರ್ವಕ ತಡೆ ಕಂಡುಬಂದರೆ ಶೇ. 100ರಷ್ಟು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪಿಡಿಒ ಅಸೋಸಿಯೇಷನ್ನೊಂದಿಗೆ ನಾವು ಮಾತುಕತೆ ನಡೆಸಿದ್ದೇವೆ. ಆದಷ್ಟು ಬೇಗ ಪಿಡಿಒ ಜ್ಯೇಷ್ಠತಾ ಪಟ್ಟಿ ಗೊಂದಲ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಇದಕ್ಕೆ ಸ್ವಲ್ಪ ಕಾಲಾವಕಾಶದ ಅಗತ್ಯವಿದೆ. ನಮ್ಮ ಸರ್ಕಾರದಲ್ಲಿ ನೇಮಕಾತಿ ಹಾಗೂ ಬಡ್ತಿಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಪಿಡಿಒ ಮತ್ತು ಬೇರೆ ಬೇರೆ ಹುದ್ದೆಗಳ ನೇಮಕಕ್ಕೆ ಪರೀಕ್ಷೆ ನಡೆಸಿದ್ದೇವೆ. ಕೆಪಿಎಸ್ಸಿಯಲ್ಲಿ 247 ಪಿಡಿಒ ಅಂತಿಮ ಪಟ್ಟಿ ಪ್ರಕಟ ವಿಳಂಬವಾಗಿದ್ದು, ಈ ವಿಚಾರವಾಗಿ ಕೆಪಿಎಸ್ಸಿ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಹಣ ಪೋಲಾಗುವುದನ್ನು ತಡೆಯಲು ಸೋಷಿಯಲ್ ಆಡಿಟ್ ಅನ್ನು ಬಲಪಡಿಸಲು ಎಲ್ಲ ಕ್ರಮ ಕೈಗೊಂಡಿದ್ದೇವೆ.