ಭಾರತದಲ್ಲಿ ಕೋವಿಡ್ ಸೋಂಕಿನ ವಿರುದ್ಧ ಹೋರಾಟಕ್ಕೆ ಅಸ್ತ್ರವನ್ನಾಗಿ ಬಳಸಲಾಗುತ್ತಿರುವ ದೇಶೀಯವಾಗಿ ತಯಾರಿಸಿರುವ ’ಕೋವ್ಯಾಕ್ಸಿನ್’ ಲಸಿಕೆಗೆ ಬ್ರಿಟನ್ ಸರ್ಕಾರದ ಮನ್ನಣೆ ಪಡೆದಿದೆ, ಜೊತೆಗೆ ಕೋವಿಡ್ ನಿರೋಧಕ ಲಸಿಕೆಗಳ ಪಟ್ಟಿಯಲ್ಲಿ ಸೋಮವಾರದಿಂದ ಸ್ಥಾನ ಸಿಕ್ಕಿದೆ.
ಈ ನಡೆಯಿಂದ ಪೂರ್ಣ ಪ್ರಮಾಣದಲ್ಲಿ ಕೋವಿಡ್ ವಿರುದ್ಧ ಲಸಿಕೆ ಪಡೆದ ಭಾರತೀಯರು ಬ್ರಿಟನ್‌ಗೆ ಪ್ರಯಾಣ ಮಾಡಲು ಇದ್ದ ಅಡೆತಡೆಗಳನ್ನು ನಿವಾರಿಸಿದಂತೆ ಆಗಿದೆ. ಭಾರತದಿಂದ ನಿರ್ಗಮನಕ್ಕೂ ಮುನ್ನ ಪಿಸಿಆರ್ ಪರೀಕ್ಷೆ ಹಾಗೂ ಪ್ರಯಾಣಿಕರ ಲೊಕೇಷನ್ ಅರ್ಜಿಗಳಲ್ಲಿ ತಿಳಿಸಿದ ಸ್ಥಳ ತಲುಪಿದ ಬಳಿಕ ಅಲ್ಲಿ ಸ್ವಯಂ-ಐಸೋಲೇಷನ್ ಆಗಬೇಕಾದ ಅನಿವಾರ್ಯತೆ ಇನ್ನು ಮುಂದೆ ಕೋವ್ಯಾಕ್ಸಿನ್ ಪಡೆದ ಮಂದಿಗೆ ಇರುವುದಿಲ್ಲ. ಪೂರ್ಣವಾಗಿ ಲಸಿಕೆ ಪಡೆಯದ ಪ್ರಯಾಣಿಕರಿಗೆ ಮೇಲ್ಕಂಡ ಪರೀಕ್ಷೆಗಳಿಗೆ ಒಳಗಾಗುವ ಅಗತ್ಯವಿರಲಿದೆ.
ನಟ ಕಾರ್ತಿಕ್ ಆರ್ಯನ್ ಗೆ ಎದೆ ಮೇಲಿನ ಹಚ್ಚೆ ಪ್ರದರ್ಶಿಸಿದ ಮಹಿಳಾ ಅಭಿಮಾನಿ..!
ಕೋವಿಶೀಲ್ಡ್ ಲಸಿಕೆ ಸೇರಿದಂತೆ ಅನುಮೋದಿಸಲ್ಪಟ್ಟ ಇತರೆ ಲಸಿಕೆಗಳನ್ನು ಸಂಪೂರ್ಣ ಪ್ರಮಾಣದಲ್ಲಿ ಪಡೆದ ಪ್ರಯಾಣಿಕರಂತೆ ಕೋವ್ಯಾಕ್ಸಿನ್ ಲಸಿಕೆ ಪಡೆದ ಮಂದಿ ಸಹ ಬ್ರಿಟನ್‌ಗೆ ತೆರಳುವ ವೇಳೆ ಅಲ್ಲಿಗೆ ತಲುಪಿದ ಬಳಿಕ ಪಿಸಿಆರ್ ಅಥವಾ ಲ್ಯಾಟರಲ್ ಫ್ಲೋ ಪರೀಕ್ಷೆಗೆ ಹಾಜರಾಗಬೇಕಿದೆ.
“ನವೆಂಬರ್ 22ರ ಸೋಮವಾರ ಬೆಳಿಗ್ಗೆ 4 ಗಂಟೆಯಿಂದ ಸರ್ಕಾರವು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಲಸಿಕೆಗಳ ಪಟ್ಟಿಯಲ್ಲಿರುವ (ಇಯುಎಲ್) ಲಸಿಕೆಗಳನ್ನು ಮಾನ್ಯೀಕರಿಸಲಿದೆ,” ಎಂದು ಬ್ರಿಟನ್‌ನ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಭಾರತದಲ್ಲಿ ಬಳಸಲ್ಪಡುವ ಕೋವಿಡ್ ನಿರೋಧಕ ಲಸಿಕೆಗಳ ಪೈಕಿ ಅತಿ ಹೆಚ್ಚಿನ ಬಳಕೆಯಾಗುತ್ತಿರುವ ಎರಡನೇ ಲಸಿಕೆಯಾದ, ಭಾರತ್ ಬಯೋಟೆಕ್ ಉತ್ಫಾದಿತ, ಕೋವ್ಯಾಕ್ಸಿನ್‌ಗೆ ಈ ತಿಂಗಳ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಪಟ್ಟಿಯಲ್ಲಿ ಮಾನ್ಯತೆ ನೀಡಲಾಗಿದೆ.
ವಿಶ್ವ ಸಂಸ್ಥೆಯ ಇಯುಎಲ್ ಪಟ್ಟಿಯಲ್ಲಿ ಲಸಿಕೆಯನ್ನು ಸೇರಿಸಬೇಕಾದಲ್ಲಿ ಸಂಬಂಧಪಟ್ಟ ಲಸಿಕೆಯನ್ನು ಗುಣಮಟ್ಟ, ಸುರಕ್ಷತೆ ಹಾಗೂ ಪರಿಣಾಮಶೀಲತೆಯಂಥ ಮಾನದಂಡಗಳ ಆಧಾರದ ಮೇಲೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಸಮಿತಿ ಪರೀಕ್ಷೆ ಮಾಡುತ್ತಾರೆ. ಅಮೆರಿಕ, ಸ್ಪೇನ್, ಸ್ವೀಡನ್, ಸ್ವಿಜ಼ರ್ಲೆಂಡ್ ಹಾಗೂ ಐಸ್ಲೆಂಡ್‌ಗಳಲ್ಲಿ ಅದಾಗಲೇ ಈ ವರ್ಗೀಕರಣದಡಿ ಅನೇಕ ಲಸಿಕೆಗಳಿಗೆ ಮನ್ನಣೆ ನೀಡಲಾಗಿದೆ.
ಇದೇ ವೇಳೆ, 18 ವರ್ಷದ ಒಳಪಟ್ಟ ಮಂದಿಗೂ ಸಹ ಪ್ರಯಾಣದ ನಿಯಮಗಳನ್ನು ಸರಳೀಕರಿಸುತ್ತಿರುವುದಾಗಿ ಬ್ರಿಟನ್ ಸರ್ಕಾರ ತಿಳಿಸಿದ್ದು, ಕೆಂಪು-ಪಟ್ಟಿಯಲ್ಲಿಲ್ಲದ ದೇಶಗಳಿಂದ ಬರುತ್ತಿರುವ ಮಕ್ಕಳನ್ನು ಸಂಪೂರ್ಣ ಪ್ರಮಾಣದ ಲಸಿಕೆ ಪಡೆದವರ ಪಟ್ಟಿಗೆ ಸೇರಿಸಲಾಗುವುದು ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. ಇದರರ್ಥ ಈ ವಯೋಮಿತಿಯ ಮಂದಿಗೆ ಆಗಮನದ ಬಳಿಕ ಸ್ವಯಂ-ಐಸೋಲೇಷನ್ ಅಗತ್ಯವಿರುವುದಿಲ್ಲ ಹಾಗೂ ಆಗಮನದ ನಂತರ ಲ್ಯಾಟರಲ್ ಫ್ಲೋ ಪರೀಕ್ಷೆ ಮತ್ತು ಪಿಸಿಆರ್ ಖಾತ್ರಿಯ ಉಚಿತ ಪರೀಕ್ಷೆಯಲ್ಲಿ ಭಾಗಿಯಾಗಬೇಕಾಗುತ್ತದೆ ಅಷ್ಟೇ.