ಬೆಂಗಳೂರು: ಮಾರ್ಚ್ 25ರ ಸೋಮವಾರದಿಂದ ಆರಂಭವಾಗಲಿರುವ ಎಸ್ಎಸ್ಎಲ್ಸಿ ಪರೀಕ್ಷಾ ಸಿಬ್ಬಂದಿ ಸಂಭಾವನೆ ಶೇಕಡ 5ರಷ್ಟು ಹೆಚ್ಚಳ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳ ಸಾಮಗ್ರಿ ಖರೀದಿ ವೆಚ್ಚ ಮತ್ತು ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿಯ ಸಂಭಾವನೆಯನ್ನು ಹೆಚ್ಚಳ ಮಾಡಲಾಗಿದೆ. ಆಯಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಖಾತೆಗಳಿಗೆ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದೆ.
ಪರಿಷ್ಕರಿಸಲಾಗಿರುವ ಸಂಭಾವನೆ ಪ್ರಕಾರ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ 1610 ರೂ., ಉಪ ಅಧೀಕ್ಷಕರಿಗೆ 1533 ರೂ., ಕಸ್ಟೊಡಿಯನ್ ಗೆ 1449 ರೂ., ಕೊಠಡಿ ಮೇಲ್ವಿಚಾರಕರಿಗೆ 1038 ರೂ., ಸ್ಥಾನಕ ಜಾಗೃತದಳದವರಿಗೆ 950 ರೂ., ಮೊಬೈಲ್ ಸ್ವಾಧೀನಾಧಿಕಾರಿಗೆ 696 ರೂ., ಪರೀಕ್ಷಾ ಕೇಂದ್ರಕ್ಕೆ ನಿಯೋಜಿತ ಪೊಲೀಸ್ ಸಿಬ್ಬಂದಿಗೆ 912 ರೂ., ಸಹಾಯಕರಿಗೆ 805 ರೂ., ಡಿ ದರ್ಜೆ ನೌಕರರಿಗೆ 609 ರೂ. ನಿಗದಿಪಡಿಸಲಾಗಿದೆ.
ಪರೀಕ್ಷಾ ಸಾಧಿಲ್ವಾರು ವೆಚ್ಚ ಪ್ರತಿ ವಿದ್ಯಾರ್ಥಿಗೆ 12 ರೂ. ನಿಗದಿ ಮಾಡಲಾಗಿದೆ. ಬಿಡುಗಡೆ ಮಾಡಿದ ಹಣದ ವೆಚ್ಚದ ಮಾಹಿತಿಯನ್ನು ಪರೀಕ್ಷೆ ಮುಗಿದ 15 ದಿನಗಳ ಒಳಗೆ ಮಂಡಳಿಗೆ ದಾಖಲೆ ಸಮೇತ ಸಲ್ಲಿಸಲು ತಿಳಿಸಲಾಗಿದೆ.