ನವದೆಹಲಿ : ಕ್ಯಾಬ್ ಚಾಲಕರ ಅನುಕೂಲಕ್ಕಾಗಿ ಓಲಾ, ಊಬರ್ ನಂತಹ ಟ್ಯಾಕ್ಸಿ ಸೇವೆಯನ್ನು ಆರಂಭಿಸಲು ಕೇಂದ್ರ ಸರ್ಕಾರ ಘೋಷಿಸಿದೆ.
ಹೌದು, ಭಾರತ ಸರ್ಕಾರವು ದೇಶಾದ್ಯಂತ “ಸಹಕಾರಿ ಟ್ಯಾಕ್ಸಿ” ಎಂಬ ಹೊಸ ಸಹಕಾರಿ ಆಧಾರಿತ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲು ಸಜ್ಜಾಗಿದೆ.
ಕೇಂದ್ರ ಸಚಿವ ಅಮಿತ್ ಶಾ ಬುಧವಾರ ಸಂಸತ್ತಿನಲ್ಲಿ ಈ ಯೋಜನೆಯನ್ನು ಘೋಷಿಸಿದರು, ಹೊಸ ಸೇವೆಯು ದ್ವಿಚಕ್ರ ವಾಹನ ಟ್ಯಾಕ್ಸಿಗಳು, ರಿಕ್ಷಾಗಳು ಮತ್ತು ನಾಲ್ಕು ಚಕ್ರದ ಟ್ಯಾಕ್ಸಿಗಳನ್ನು ನೋಂದಾಯಿಸುತ್ತದೆ ಎಂದು ಹೇಳಿದ್ದಾರೆ. ಓಲಾ ಮತ್ತು ಉಬರ್ ಮಾದರಿಯಲ್ಲೇ ಸಹಕಾರಿ ತತ್ವದಡಿ ಈ ಕ್ಯಾಬ್ ಸಂಸ್ಥೆ ನಡೆಸಲ್ಪಡಲಿದೆ.
ಈ ಸಹಕಾರಿ ಟ್ಯಾಕ್ಸಿಯಿಂದ ಬರುವ ಲಾಭ ಉದ್ಯಮಿಗಳಿಗೆ ಹೋಗುವುದಿಲ್ಲ, ನೇರವಾಗಿ ಚಾಲಕರಿಗೆ ಹೋಗಲಿದೆ ಎಂದು ಅವರು ಹೇಳಿದರು.
ಸಹಕಾರ ಸಚಿವಾಲಯ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸುಮಾರು ಮೂರುವರೆ ವರ್ಷಗಳಿಂದ ಶ್ರಮಿಸುತ್ತಿದೆ. ಇದರ ಫಲವಾಗಿ ಇನ್ನೇನು ಕೆಲ ದಿನಗಳಲ್ಲಿ ಈ ಸಹಕಾರಿ ಟ್ಯಾಕ್ಸಿ ಸೇವೆ ಆರಂಭವಾಗಲಿದೆ. ಈ ಯೋಜನೆಯಡಿ ದ್ವಿಚಕ್ರ ವಾಹನ, ಟ್ಯಾಕ್ಸಿ ಆಟೋ ಕೂಡಾ ನೋಂದಣಿ ಮಾಡಿಕೊಳ್ಳಬಹುದು.