ಬೆಂಗಳೂರು: ಭಾರಿ ಏರಿಕೆ ಕಂಡಿದ್ದ ತರಕಾರಿ ದರ ಕಡಿಮೆಯಾಗತೊಡಗಿದ್ದು ಗ್ರಾಹಕರು ನಿಟ್ಟಿಸಿರು ಬಿಟ್ಟಿದ್ದಾರೆ. ಈರುಳ್ಳಿ, ಟೊಮೆಟೊ, ನುಗ್ಗೆಕಾಯಿ ಸೇರಿದಂತೆ ಅನೇಕ ತರಕಾರಿಗಳ ದರ ಕಡಿಮೆಯಾಗಿದೆ.
ದರ ಕೇಳಿ ಕಂಗಾಲಾಗಿದ್ದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಜನವರಿ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಅವರೇಕಾಯಿ ಮಾರುಕಟ್ಟೆಗೆ ಬಂದಲ್ಲಿ ತರಕಾರಿ ದರ ಮತ್ತಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ಧನುರ್ಮಾಸ ಹಿನ್ನೆಲೆಯಲ್ಲಿ ಶುಭ ಕಾರ್ಯಕ್ರಮಗಳು ಇಲ್ಲದ ಕಾರಣ ತರಕಾರಿಗೆ ಬೇಡಿಕೆ ಕಡಿಮೆಯಾಗಿ ಬೆಲೆ ಹೇಳಿಕೆಯಾಗಿದೆ. ಎರಡು ವಾರದ ಹಿಂದೆ ಶತಕದ ಸಮೀಪಕ್ಕೆ ಹೋಗಿದ್ದ ಕೆಜಿ ಈರುಳ್ಳಿ ದರ ಗುರುವಾರ 55 ರಿಂದ 60 ರೂ.ಗೆ ಇಳಿದಿದೆ. ಟೊಮೆಟೊ ದರ 50 ರೂ. ನಿಂದ 20-30 ರೂ.ಗೆ ಇಳಿದಿದೆ. ಹಾಪ್ ಕಾಮ್ಸ್ ನಲ್ಲಿ 500 ರೂ. ಇದ್ದ ಒಂದು ಕೆಜಿ ನುಗ್ಗೆಕಾಯಿ ದರ 280 ರೂ.ಗೆ ಇಳಿಕೆಯಾಗಿದೆ.
ಬೀನ್ಸ್ ದರ 80 ರೂ.ನಿಂದ 50 ರೂ.ಗೆ ಇಳಿಕೆಯಾಗಿದ್ದು, ಮೂಲಂಗಿ, ಕ್ಯಾಪ್ಸಿಕಂ, ಬದನೆಕಾಯಿ, ಸೌತೆಕಾಯಿ ದರ ಕೂಡ ಕಡಿಮೆಯಾಗಿದೆ. ಅವರೇಕಾಯಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಲ್ಲಿ ತರಕಾರಿ ದರ ಮತ್ತಷ್ಟು ಕಡಿಮೆಯಾಗಲಿದೆ. ಆದರೆ ಸೊಪ್ಪಿನ ದರ ಕಡಿಮೆಯಾಗಿಲ್ಲ.