
ಬೆಂಗಳೂರು: ರಿಟ್ ಅರ್ಜಿ ಇತ್ಯರ್ಥವಾದ ಕೂಡಲೇ ಪಿಡಿಒಗಳಿಗೆ ಮುಂಬಡ್ತಿ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.
ವಿಧಾನಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಚಿದಾನಂದ ಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ರಾಜ್ಯದಲ್ಲಿ ಪಿಡಿಒ ಮುಂಬಡ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ಅದು ಇತ್ಯರ್ಥವಾದ ಕೂಡಲೇ ಶೀಘ್ರವೇ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಪಿಡಿಒಗಳಿಗೆ 10 ರಿಂದ 12 ವರ್ಷ ಕಾಲ ಬಡ್ತಿ ನೀಡಲು ಸಾಧ್ಯವಾಗಿರಲಿಲ್ಲ. ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ನಾವು ಯಾವುದೇ ಕ್ರಮ ಕೈಗೊಳ್ಳಲು ಆಗುವುದಿಲ್ಲ. ರಿಟ್ ಅರ್ಜಿ ಇತ್ಯರ್ಥವಾದ ಕೂಡಲೇ ಮುಂಬಡ್ತಿ ನೀಡುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.