ದಾವಣಗೆರೆ : ಶೀಘ್ರವೇ 46 ಸಾವಿರ ರೈಲ್ವೇ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ರೈಲ್ವೆ ರಾಜ್ಯ ಸಚಿವರಾದ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರೈಲ್ವೆ ಇಲಾಖೆಯಲ್ಲಿ ಒಟ್ಟು 12 ಲಕ್ಷ ಹುದ್ದೆಗಳಿದ್ದು 15 ಲಕ್ಷ ಜನರು ಪಿಂಚಣಿ ಪಡೆಯುತ್ತಿದ್ದಾರೆ. ಖಾಲಿ ಇರುವ 16 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಆದೇಶ ನೀಡಲಾಗಿದ್ದು ನಮ್ಮ ರಾಜ್ಯದ ಯುವಕರು ಇದರ ಉಪಯೋಗ ಪಡೆದುಕೊಳ್ಳಬೇಕು, ಮುಂದಿನ ದಿನಗಳಲ್ಲಿ ಖಾಲಿ ಇರುವ 46 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುತ್ತದೆ ಎಂದರು.
ದಾವಣಗೆರೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಸಭೆಯಲ್ಲಿ ಮಾತನಾಡಿ ದಾವಣಗೆರೆ ನಗರದಲ್ಲಿನ ಮೀನು ಮಾರುಕಟ್ಟೆ ಬಳಿ ರೈಲ್ವೆ ಮೇಲ್ಸೇತುವೆ ಅಥವಾ ಕೆಳಸೇತುವೆ ಅಗತ್ಯವಾಗಿದೆ. ಅಶೋಕ ಟಾಕೀಸ್ ಹತ್ತಿರ ರಸ್ತೆ ಕಿರಿದಾಗಿದ್ದು ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕು, ಲಿಂಗೇಶ್ವರ ದೇವಸ್ಥಾನದ ಹತ್ತಿರ ಪಾದಚಾರಿ ಮಾರ್ಗ ನಿರ್ಮಿಸಲು, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ಮಾರ್ಗದಲ್ಲಿ ಸೂರಗೊಂಡನಕೊಪ್ಪ ಅಥವಾ ನ್ಯಾಮತಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಅವಕಾಶ ಮಾಡಲು, ಹರಿಹರದಲ್ಲಿನ ರೈಲ್ವೆ ಆಸ್ಪತ್ರೆ, ಸ್ಕೂಲ್ ಮೇಲ್ದರ್ಜೆಗೇರಿಸಲು ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.
ಹರಿಹರ ಶಾಸಕರಾದ ಬಿ.ಪಿ.ಹರೀಶ್ ಹೊಸಪೇಟೆ ಹೋಗುವ ಹೆದ್ದಾರಿಯಲ್ಲಿ ಒಂದೇ ರೈಲ್ವೆ ಸೇತುವೆ ಇದ್ದು ಮತ್ತೊಂದು ಬ್ರಿಡ್ಜ್ ನಿರ್ಮಾಣ ಮಾಡಬೇಕು, ಮಳೆ ಬಂದಾಗ ಈ ಮಾರ್ಗದ ವಾಹನಗಳಿಗೆ ತೊಂದರೆಯಾಗುವುದರಿಂದ ರೈಲ್ವೆ ಸೇತುವೆಯ ಅವಶ್ಯಕತೆ ಇದೆ ಎಂದರು.
ರೈಲ್ವೆ ವೇಗ ಹೆಚ್ಚಿಸಲು ಕ್ರಮ; ರೈಲ್ವೆ ಇಂಜಿನ್ಗಳು ಬಹುತೇಕ ಶೇ 98 ರಷ್ಟು ವಿದ್ಯುತ್ ಚಾಲಿತವಾಗಿದ್ದು ಶೇ 2 ರಷ್ಟು ಮಾತ್ರ ಡೀಸೆಲ್ ಇಂಜಿನ್ಗಳಿವೆ. ರೈಲ್ವೆ ಪ್ರಯಾಣದ ವೇಗ ಪ್ರಸ್ತುತ 110 ಕಿ.ಮೀ ಇದ್ದು ಇದನ್ನು 135 ಕಿ.ಮೀ ವರೆಗೆ ವೇಗ ಹೆಚ್ಚಿಸುವ ಗುರಿಯೊಂದಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಮಾಡಲಾಗುತ್ತಿದೆ. ವಂದೇ ಭಾರತ್ ರೈಲು ಬಡುವರು, ಮಧ್ಯಮ ವರ್ಗದವರಿಗೆ ತುರ್ತು ಪ್ರಯಾಣಕ್ಕಾಗಿ ಕೈಗೆಟಕುವ ದರದಲ್ಲಿ ಟಿಕೆಟ್ ಇದ್ದು ಇದರಲ್ಲಿ ನೀಡಲಾಗಿರುವ ಸೌಲಭ್ಯಗಳ ಬಗ್ಗೆ ಅರಿಯಲು ಪ್ರಯಾಣಿಸಬೇಕೆಂದರು.