ದಾವಣಗೆರೆ: ರಾಜ್ಯದಲ್ಲಿನ ಭೂರಹಿತ ಬಡವರಿಗೆ ಮುಂದಿನ ವರ್ಷದೊಳಗೆ ಹಕ್ಕುಪತ್ರ ನೀಡಲು 10 ದಿನಗಳಲ್ಲಿ ಬಗರ್ ಹುಕುಂ ಸಮಿತಿಗಳನ್ನು ರಚನೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕಂದಾಯ, ಭೂ ಮಾಪನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ನಮೂನೆ 57 ರಲ್ಲಿ 37005, ಫಾರಂ 50 ರಡಿ 33256, ಫಾರಂ 53 ರಡಿ 36324 ಅರ್ಜಿಗಳು ಸ್ವೀಕೃತವಾಗಿದ್ದು, ಬಗರ್ ಹುಕ್ಕುಂ ರಡಿ 380 ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ರಾಜ್ಯದಲ್ಲಿ ಈ ಅರ್ಜಿಗಳು ಸುಮಾರು 10 ಲಕ್ಷ ಇವೆ.
ಬಗರ್ ಹುಕುಂ ಅಡಿ ಅರ್ಜಿ ಸಲ್ಲಿಸಲು 5 ಎಕರೆಗಿಂತ ಕಡಿಮೆ ಸಾಗುವಳಿ ಹೊಂದಿದ ರೈತರು ಅರ್ಜಿ ಸಲ್ಲಿಸಲು ಅವಕಾಶ ಇದೆ. 2004 ರ ಹಿಂದೆ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದಲ್ಲಿ ಮಾತ್ರ ಅವಕಾಶ ಇದ್ದು, ಅಂದಿಗೆ 18 ವರ್ಷ ವಯಸ್ಸಾಗಿರಬೇಕು, ಜಂಟಿ ಕುಟುಂಬದ ಎಲ್ಲಾ ಆಸ್ತಿ ಸೇರಿ 5 ಎಕರೆಗಿಂತ ಕಡಿಮೆ ಇರಬೇಕು. ಈ ಅರ್ಜಿಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಮಾಡಲು ಒಂದು ವಾರದಲ್ಲಿ ಬಗರ್ ಹುಕುಂ ಅ್ಯಪ್ ಅಧಿಕಾರಿಗಳ ಕೈ ಸೇರಲಿದ್ದು, ಎಲ್ಲಾ ಆನ್‍ಲೈನ್‍ನಲ್ಲಿ ಪರಿಶೀಲನೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಬಗರ್ ಹುಕುಂ ಅಡಿ ಅರ್ಜಿ ಹಾಕಿ ಈ ಹಿಂದೆ ಜಮೀನು ಮಂಜೂರು ಮಾಡಿದ್ದಲ್ಲಿಯೂ ಅನರ್ಹರಾಗಿದ್ದಲ್ಲಿ ಮರು ವಶಕ್ಕೆ ಪಡೆಯಬಹುದಾಗಿದೆ ಎಂದು ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡರವರ ಪ್ರಶ್ನೆಗೆ ವಿವರಿಸಿದರು.
ಬಗರ್ ಹುಕುಂ ದುರ್ಬಳಕೆ ತಡೆಗಟ್ಟಲು ಮಂಜೂರಾತಿಗೆ ಡಿಜಿಟಲ್ ಸಹಿಗೆ ಅವಕಾಶ ಮಾಡಿಕೊಟ್ಟು, ಡಿಜಿಟಲ್ ಸಾಗುವಳಿ ಚೀಟಿಯನ್ನು ನೀಡಲಾಗುತ್ತದೆ. ಈ ಹಿಂದೆ ನೀಡಿದ ಸಾಗುವಳಿ ಚೀಟಿ ನೀಡಿದ ನೈಜತೆಯ ಬಗ್ಗೆ ರಾಜ್ಯದಲ್ಲಿ ಲಕ್ಷಾಂತರ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಮುಂದಿನ ದಿನಗಳಲ್ಲಿ ಈಗಾಗದಂತೆ ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದರು.
ಕೋರ್ಟ್ ಕೇಸ್‍ಗಳನ್ನು ಗಮನಿಸಲು ಸೂಚನೆ;
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜಮೀನುಗಳ ವಿಷಯವಾಗಿ ಅನೇಕ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದರೂ ಸಹ ಯಾವುದೇ ವಕಾಲತ್ತು ಹಾಕದೇ ಇದ್ದ ರಾಜ್ಯದ ಸುಮಾರು 10500 ಪ್ರಕರಣಗಳಿದ್ದವು. ಈ ಬಗ್ಗೆ ಪರಿಶೀಲನೆ ನಡೆಸಿ ವಕಾಲತ್ ಹಾಕಿಸಿದ್ದರಿಂದ ಸುಮಾರು 2500 ಕೇಸ್‍ಗಳು ಉಳಿದುಕೊಂಡಿವೆ.
ಸರ್ಕಾರಿ ಭೂಮಿ ರಕ್ಷಣೆಗೆ ಬೀಟ್ ಪದ್ದತಿ;
ಸರ್ಕಾರಿ ಜಮೀನುಗಳ ರಕ್ಷಣೆಗಾಗಿ ಆಪ್ ಸಿದ್ದಪಡಿಸಲಾಗುತ್ತಿದ್ದು ವಾರದಲ್ಲಿ ಇದು ಅಸ್ತಿತ್ವಕ್ಕೆ ಬರಲಿದೆ. ಸರ್ಕಾರಿ ಜಮೀನುಗಳನ್ನು ಆಪ್ ಮೂಲಕ ಡಾಟಾಬೇಸ್ ಸಿದ್ದಪಡಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಆ ಸ್ಥಳಕ್ಕೆ ಗ್ರಾಮಲೆಕ್ಕಗರು ಭೇಟಿ ನೀಡಿ ಭೂಮಿ ಒತ್ತುವರಿಯಾಗಿದೆಯೋ ಇಲ್ಲವೋ ಎಂಬುದನ್ನು ಆಪ್ ಮೂಲಕ ಆಯಾ ಸ್ಥಳದಿಂದಲೇ ದೃಢೀಕರಿಸಿ ಅಪ್‍ಲೋಡ್ ಮಾಡಬೇಕು. ಒಂದು ವೇಳೆ ಸರ್ಕಾರಿ ಜಮೀನು ಒತ್ತುವರಿಯಾಗಿದ್ದಲ್ಲಿ ಆನ್‍ಲೈನ್ ಮೂಲಕವೇ ತಹಶೀಲ್ದಾರರಿಗೆ ವರದಿ ನೀಡಬೇಕು. ಇದರಿಂದ ಸರ್ಕಾರಿ ಭೂ ಕಬಳಿಕೆ ತಪ್ಪಲಿದೆ ಎಂದರು.
ಹೊಸ ಕಂದಾಯ ಗ್ರಾಮಗಳ ರಚನೆ ಪ್ರಗತಿ:
ಸರ್ಕಾರ 2017 ರಿಂದಲೇ ರಾಜ್ಯದಲ್ಲಿನ ತಾಂಡಾಗಳು, ಗೊಲ್ಲರ ಹಟ್ಟಿ, ಕುರುಬರ ಹಟ್ಟಿ ಇಂತಹ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಕಾನೂನನ್ನು ಜಾರಿಗೆ ತಂದಿದ್ದು, ಹೊಸ ಕಂದಾಯ ಗ್ರಾಮಗಳ ರಚನೆಯಲ್ಲಿ ಜಿಲ್ಲೆಯ ದಾವಣಗೆರೆ 22, ಹರಿಹರ 2, ಹೊನ್ನಾಳಿ 4, ಚನ್ನಗಿರಿ 29, ನ್ಯಾಮತಿ 4, ಜಗಳೂರು ತಾಲ್ಲೂಕಿನ 29 ಗ್ರಾಮಗಳನ್ನು ಒಳಗೊಂಡು ಒಟ್ಟು 84 ಗ್ರಾಮಗಳನ್ನು ಗುರುತಿಸಲಾಗಿದೆ. ಅದರಲ್ಲಿ 48 ಗ್ರಾಮಗಳನ್ನು ಈಗಾಗಲೇ ಕಂದಾಯ ಗ್ರಾಮಗಳೆಂದು ಅಂತಿಮವಾಗಿದ್ದು, 3703 ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಉಳಿದ ಗ್ರಾಮಗಳಿಗೂ ಸಮೀಕ್ಷೆ ನಡೆಸಿ ಶೀಘ್ರವಾಗಿ ಹಕ್ಕುಪತ್ರ ವಿತರಿಸಬೇಕು.
ಸೆಪ್ಟೆಂಬರ್ ತಿಂಗಳಿನಿಂದ 28 ಗ್ರಾಮಗಳನ್ನು ಪ್ರಾಥಮಿಕ ಅಧಿಸೂಚನೆಗಾಗಿ ಸರ್ಕಾರಕ್ಕೆ 36 ಗ್ರಾಮಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಪ್ರಸ್ತಾವನೆ ಸಲ್ಲಿಸದೇ ಇರುವ 8 ಗ್ರಾಮಗಳ ಪ್ರಕರಣಗಳಲ್ಲಿ 4 ಗ್ರಾಮಗಳು ಖಾಸಗೀ ಜಮೀನಿನಲ್ಲಿ ಮತ್ತು ಉಳಿದ 4 ಗ್ರಾಮಗಳು ಅರಣ್ಯ ಜಮೀನಿನಲ್ಲಿ ಸ್ಥಾಪನೆಯಾಗಿದ್ದು, ಅರಣ್ಯ ಹಕ್ಕು ಸಮಿತಿಯಲ್ಲಿ ಪ್ರಸ್ತಾವನೆ ಸಲ್ಲಿಸಿ, ಮುಂದಿನ ಕ್ರಮ ಕೈಗೊಳ್ಳಬೇಕು 2024ರ ಜನವರಿ ವೇಳೆಗೆ ಗುರುತಿಸಲ್ಪಟ್ಟಿರುವ ಎಲ್ಲಾ ಬಾಕಿ ಉಳಿದ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಬೇಕು ಎಂದರು.
ನಕಾಶೆ ದಾರಿ ಒತ್ತುವರಿ ತೆರವಿಗೆ ಜೆಸಿಬಿ;
ಯಾವುದೇ ನಕಾಶೆಯಲ್ಲಿನ ದಾರಿ, ರಸ್ತೆಯನ್ನು ಒತ್ತುವರಿ ಮಾಡುವಂತಿಲ್ಲ, ಒತ್ತುವರಿ ಮಾಡಿರುವುದು ಕಂಡು ಬಂದಲ್ಲಿ ತಹಶೀಲ್ದಾರರು ಸ್ವಯಂಪ್ರೇರಿತವಾಗಿ ಒತ್ತುವರಿ ತೆರವು ಮಾಡಿ ಸಾರ್ವಜನಿಕ ದಾರಿಗೆ ಅನುವು ಮಾಡಿಕೊಡಬೇಕು. ಅಗತ್ಯವಿದ್ದಲ್ಲಿ ಜೆಸಿಬಿ ಬಳಸಿ ಎರಡು ಕಡೆ ಟ್ರಂಚ್ ಒಡೆದು ದಾರಿ ಮಾಡಿಕೊಡಬೇಕು, ಈ ಹಣವನ್ನು ಲ್ಯಾಂಡ್ ಕಾರ್ಪೋರೇಷನ್ ಅನುದಾನದಲ್ಲಿ ಭರಿಸಲು ತಿಳಿಸಿದರು.
ನಕಾಶೆ ದಾರಿ ಜೊತೆಗೆ ರೂಢಿಗತ ದಾರಿಗಳಿದ್ದಲ್ಲಿ ಎರಡು ತಲೆಮಾರುಗಳಿಂದ ಕೃಷಿ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದಲ್ಲಿ ಅಂತಹ ದಾರಿಗಳನ್ನು ಬಿಟ್ಟುಕೊಡಬೇಕು. ಇದರಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿಯಾಗುತ್ತದೆಯಲ್ಲದೆ ಸಾರ್ವಜನಿಕ ಹಿತಾಸಕ್ತಿ ಇರುತ್ತದೆ. ಈ ಉದ್ದೇಶದಿಂದಲೇ ಸರ್ಕಾರ ವಾರದ ಹಿಂದೆ ಸುತ್ತೋಲೆಯನ್ನು ಹೊರಡಿಸಿದೆ. ಸಿಆರ್‍ಪಿಸಿ 147 ರಡಿ ತಾತ್ಕಾಲಿಕ ಅವಕಾಶ ಕಲ್ಪಿಸಬಹುದು. ತಹಶೀಲ್ದಾರರು ಇಂತಹ ಪ್ರಕರಣಗಳು ಕಂಡು ಬಂದಾಗ ಇತ್ಯರ್ಥ ಮಾಡಬೇಕು, ಅನಾವಶ್ಯಕವಾಗಿ ಕೋರ್ಟ್‍ಗೆ ಹೋಗಲು ಅವಕಾಶ ನೀಡದೆ, ಕೋರ್ಟ್‍ಗೆ ಹೋದರೂ ಸರಿಯಾದ ಮಹಜರು ವರದಿಯನ್ನು ಸಿದ್ದಪಡಿಸಿ ಸಲ್ಲಿಸಬೇಕೆಂದರು.
ಪಹಣಿ ಒಟ್ಟುಗೂಡಿಸಿ ಸಮಸ್ಯೆ;
ಪೈಕಿ ಪಹಣಿಗಳ ವಿಲೇವಾರಿ ಮಾಡಲು ಎಲ್ಲಾ ಪಹಣಿಗಳನ್ನು ಒಟ್ಟುಗೂಡಿಸಿ ಇಡಲಾಗಿದೆ. ಜಿಲ್ಲೆಯಲ್ಲಿ 416190 ಪಹಣಿಗಳ ಪೈಕಿ 85887 ಒಟ್ಟುಗೂಡಿಸಿರುವ ಪ್ರಕರಣಗಳಿದ್ದು ಇವುಗಳನ್ನು ಆದಷ್ಟು ಶೀಘ್ರವಾಗಿ ಇತ್ಯರ್ಥ ಮಾಡಿ ಸರ್ವೇ ನಂಬರ್ ಮಾಡಿ ಅಪ್ ಲೋಡ್ ಮಾಡಿಕೊಡಬೇಕು. ಪೈಕಿ ಪಹಣಿಗಳ ಇತ್ಯರ್ಥ ಮಾಡಿಕೊಡಲು ಹೇಳಿದ್ದರೇ ಎಲ್ಲರನ್ನು ಒಟ್ಟಿಗೆ ಸೇರಿಸಿ ಬಿಡಲಾಗಿದೆ. ಇದರಿಂದ ಅರ್ಜಿ ಜೊತೆಗೆ ಒಬ್ಬರು ಬರಬೇಕಾಗಿತ್ತು. ಈಗ ಎಲ್ಲರೂ ಬರಬೇಕಾದಂತಹ ಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. 3 ಮತ್ತು 9 ರ ಮಿಸ್ ಮ್ಯಾಚ್, ಆಕಾರ ಬಂದ್ ಮತ್ತು 3 ಮಿಸ್ ಮ್ಯಾಚ್ ಹೊರತುಪಡಿಸಿ ಉಳಿದ ಎಲ್ಲಾ ಪೈಕಿ ಪಹಣಿಗಳನ್ನು ತಿದ್ದುಪಡಿಗೆ ಅನುಮೋದಿಸಿ ಕಳುಹಿಸಲು ಸೂಚನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಈ ವೇಳೆ ಜಿಲ್ಲೆಯಲ್ಲಿ ಸರ್ವೇಯರ್ ಕೊರತೆ ಇದೆ ಎಂದಾಗ ಜನವರಿ ವೇಳೆಗೆ 100 ಪರವಾನಗಿ ಭೂ ಮಾಪಕರನ್ನು ನೀಡಲಾಗುತ್ತದೆ. ಇದರಿಂದ ಕಂದಾಯ ಗ್ರಾಮ ರಚನೆ, ಪೋಡಿ ಮುಕ್ತ ಗ್ರಾಮ ಆಂದೋಲನ ಮಾಡಲು ಸಹಕಾರಿಯಾಗುತ್ತದೆ ಎಂದು ಕಂದಾಯ ಸಚಿವರು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಬಿ.ದೇವೇಂದ್ರಪ್ಪ, ಕೆ.ಎಸ್.ಬಸವಂತಪ್ಪ, ಡಿ.ಜಿ.ಶಾಂತನಗೌಡ, ಕಂದಾಯ ಇಲಾಖೆ ಆಯುಕ್ತರಾದ ಪಿ.ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಸುರೇಶ್ ಇಟ್ನಾಳ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.