ಕಲಬುರಗಿ : ಕೃಷಿ ಹೊಂಡ ನಿರ್ಮಾಣ ಮಾಡುವ ಕೃಷಿ ಭಾಗ್ಯ ಯೋಜನೆ ಮತ್ತೆ ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ಈ ವರ್ಷ 100 ಕೋಟಿ ರೂ. ಅನುದಾನ ಮೀಸಲಿರಿಸಿದ್ದು, ಮುಂದಿನ ವರ್ಷ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಕಳೆದ ವರ್ಷ ಕಲಬುರಗಿ, ಬೀದರ, ಯಾದಗಿರಿ, ವಿಜಯಪುರ ಜಿಲ್ಲೆಯಲ್ಲಿ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗಿದ್ದರಿಂದ ಹಿಂದಿನ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತಾದರು, ಅನುದಾನ ಬಿಡುಗಡೆ ಮಾಡಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಎರಡು ಹಂತದಲ್ಲಿ 4 ಜಿಲ್ಲೆಗಳ 2,37,860 ರೈತರಿಗೆ 148 ಕೋಟಿ ರೂ. ಪರಿಹಾರ ನೀಡಿದೆ. ಇದರಲ್ಲಿ ಕಲಬುರಗಿ ಜಿಲ್ಲೆಯ 1,65,027 ರೈತರಿಗೆ 120.66 ಕೋಟಿ ರೂ. ಪರಿಹಾರ ಸೇರಿದೆ. ಇನ್ನು ಬಾಕಿ 74 ಕೋಟಿ ರೂ. ಪರಿಹಾರ ನೀಡಬೇಕಿದ್ದು, ಅದನ್ನು ಶೀಘ್ರ ರೈತರ ಖಾತೆಗೆ ಪಾವತಿಸಲಾಗುವುದು ಎಂದರು.
ನವೋದ್ಯಮ ಯೋಜನೆಯಡಿ ಹೊಸ ಎಫ್.ಪಿ.ಓಗಳಿಗೆ 5-20 ಲಕ್ಷ ರೂಪಾಯಿ ವರೆಗಿದ್ದ ಸಾಲದ ನೆರವನ್ನು 20-50 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ್ದು, ಇದಕ್ಕಾಗಿ 10 ಕೋಟಿ ಮೀಸಲಿಡಲಾಗಿದೆ. ಬೃಹತ್ ಕಟಾವ್ ಹಬ್ (ಹಾರ್ವೆಸ್ಟರ್ ಹಬ್) ಸ್ಥಾಪನೆಗೆ 50 ಕೋಟಿ ರೂ. ಮೀಸಲಿಟ್ಟಿದ್ದು, ರಾಜ್ಯದಾದ್ಯಂತ 100 ಹಬ್ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದರು.
ಬೆಳೆ ವಿಮೆಯನ್ನು ಈಗ ಖಾಸಗಿ ಕಂಪನಿಯೇ ಉಸ್ತುವಾರಿಯಾಗಿದ್ದು, ಸಮರ್ಪಕವಾಗಿ ಬೆಳೆ ಹಾನಿಗೆ ತಕ್ಕ ಪರಿಹಾರ ದೊರಕುತ್ತಿಲ್ಲ ಎಂಬುದಾಗಿ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಮೊದಲಿನಂತೆ ಮುಂದಿನ ವರ್ಷದಿಂದ ಸರ್ಕಾರದಿಂದಲೇ ಬೆಳೆ ವಿಮೆ ನಿರ್ವಹಿಸಲು ಚಿಂತನೆ ನಡೆದಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು.