ಬೆಂಗಳೂರು : ಕರ್ನಾಟಕದಿಂದ ಅಯೋಧ್ಯೆಗೆ ತೆರಳುವ ಭಕ್ತರಿಗೆ (ಜ. 31) ನಾಳೆಯಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕದಿಂದ ಅಯೋಧ್ಯೆಗೆ ತೆರಳಲು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮುಂದಾಗುತ್ತಿದ್ದು, ಈ ಹಿನ್ನೆಲೆ ಭಾರತೀಯ ರೈಲ್ವೇ ಇಲಾಖೆಯು ಕರ್ನಾಟಕದಿಂದ ಆಯೋಧ್ಯೆಗೆ ಜ.31ರಿಂದ 11 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಿದೆ.
ಶಿವಮೊಗ್ಗ, ಬೆಳಗಾವಿ ವಿಭಾಗದಿಂದ ಒಂದು ವಿಶೇಷ ಆಸ್ತಾ ರೈಲು ಸಂಚಾರವನ್ನು ಜ.31ರಿಂದ ಹಂತವಾಗಿ ಪ್ರಾರಂಭಿಸಿ ಮಾ.31ಕ್ಕೆ ಮುಕ್ತಾಯಗೊಳಿಸಲಿದೆ . ಬೆಂಗಳೂರು ನೈರುತ್ಯ ರೈಲ್ವೇ ವಿಭಾಗದಿಂದ ಮೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು ವಿಭಾಗದಿಂದ ತಲಾ ಎರಡು ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಿದೆ. ಬೆಂಗಳೂರಿನಿಂದ ತೆರಳುವ ಪ್ರಯಾಣಿಕರು ಲಕ್ನೋ ಹಾಗೂ ಬಾದಶಾ ರೈಲುಗಳ ಮೂಲಕ ತೆರಳಿದರೆ ಅಯೋಧ್ಯೆಗೆ ತೆರಳಬಹುದು.
ಜ.31, ಫೆ.14, ಮತ್ತು 28ರಂದು ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ನಿಲ್ದಾಣದಿಂದ ಹೊರಡಲಿರುವ ವಿಶೇಷ ರೈಲು ಅರಸೀಕೆರೆ, ರಾಯದುರ್ಗ, ಹೊಸಪೇಟೆ , ಗದಗ, ವಿಜಯಪುರ ಮಾರ್ಗವಾಗಿ ಅಯೋಧ್ಯೆ ತಲುಪಲಿದೆ. ಹಾಗೆಯೇ ಫೆ.04, 17, 18 ರಂದು ಮೈಸೂರಿನಿಂದ ಹೊರಡಲಿರುವ ರೈಲು ಬೆಂಗಳೂರು, ಅರಸಿಕೆರೆ, ಹೊಸಪೇಟೆ ಮಾರ್ಗವಾಗಿ ಅಯೋಧ್ಯೆ ತಲುಪಲಿದೆ. ಫೆ.07 ಮತ್ತು 21 ರಂದು ತುಮಕೂರಿನಿಂದ ಹಾಗೂ ಫೆ.11 ಮತ್ತು 21 ರಂದು ಚಿತ್ರದುರ್ಗದಿಂದ ಹೊಸಪೇಟೆ ಮಾರ್ಗವಾಗಿ ವಿಶೇಷ ರೈಲುಗಳು ಸಂಚರಿಸಲಿವೆ.
ಹಾಗೆಯೇ ಬೆಳಗಾವಿಯಿಂದ ಫೆ.17ರಂದು ಹುಬ್ಬಳ್ಳಿ ಮಾರ್ಗವಾಗಿ ಸಂಜೆ 4.40ಕ್ಕೆ ಹೊಸಪೇಟೆಗೆ ಆಗಮಿಸುವ ರೈಲು ಬಳ್ಳಾರಿ, ರಾಯಚೂರು ಮಾರ್ಗವಾಗಿ ಅಯೋಧ್ಯೆ ತಲುಪಲಿದೆ. ಈ 11 ರೈಲುಗಳು, ಕರ್ನಾಟಕದಿಂದ ಅಯೋಧ್ಯಗೆ ಮತ್ತು ಅಯೋಧ್ಯೆಯಿಂದ ಮರಳಿ ಅದೇ ನಿಲ್ದಾಣಗಳಿಗೆ ಹಿಂದಿರುಗಲಿವೆ.