ನವದೆಹಲಿ: ಸಗಟು ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಆಗಸ್ಟ್ 15ರಿಂದ ಪ್ರತಿ ಕೆಜಿಗೆ 50 ರೂ.ಗೆ ಚಿಲ್ಲರೆ ದರದಲ್ಲಿ ಟೊಮೆಟೊ ಮಾರಾಟ ಮಾಡುವಂತೆ ಗ್ರಾಹಕ ವ್ಯವಹಾರಗಳ ಇಲಾಖೆ ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಇಡಿಗೆ ನಿರ್ದೇಶನ ನೀಡಿದೆ.
ಆಗಸ್ಟ್ 15 ರಿಂದ ಅನ್ವಯವಾಗುವಂತೆ ಪ್ರತಿ ಕಿಲೋಗ್ರಾಂಗೆ 50 ರೂ.ಗೆ ಟೊಮ್ಯಾಟೊ ಮಾರಾಟ ಮಾಡಲು ಸಹಕಾರಿ ಸಂಘಗಳಾದ ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಇಡಿಗೆ ಸರ್ಕಾರ ಸೋಮವಾರ ನಿರ್ದೇಶನ ನೀಡಿದೆ. ಸಗಟು ಮಾರುಕಟ್ಟೆಗಳಲ್ಲಿ ಬೆಲೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಪ್ರತಿ ಕಿಲೋಗ್ರಾಂಗೆ 70 ರಿಂದ 50 ರೂ.ಗೆ ಇಳಿಕೆ ಮಾಡಿ ಗ್ರಾಹಕರಿಗೆ ಅನುಕೂಲವಾಗುವಂತೆ ದರ ಹೊಂದಿಸಲಾಗಿದೆ.
ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ(ಎನ್‌ಸಿಆರ್) ಜುಲೈ 14 ರಂದು ಟೊಮೆಟೊ ಚಿಲ್ಲರೆ ಮಾರಾಟ ಪ್ರಾರಂಭವಾಗಿದ್ದು, ಆಗಸ್ಟ್ 13 ರವರೆಗೆ ಒಟ್ಟು 15 ಲಕ್ಷ ಕಿಲೋಗ್ರಾಂಗಳಷ್ಟು ಮಾರಾಟ ಮಾಡಲಾಗಿದೆ.
ಆರಂಭದಲ್ಲಿ, ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಇಡಿ ಖರೀದಿಸಿದ ಟೊಮೆಟೊಗೆ ಕಿಲೋಗ್ರಾಮ್‌ಗೆ 90 ರೂಪಾಯಿ ಚಿಲ್ಲರೆ ಬೆಲೆ ನಿಗದಿಪಡಿಸಲಾಗಿತ್ತು. ಜುಲೈ 16 ರಿಂದ ಜಾರಿಗೆ ಬರುವಂತೆ ಪ್ರತಿ ಕಿಲೋಗ್ರಾಂಗೆ 80 ರೂ.ಗೆ ಇಳಿಕೆಯಾಗಿದ್ದು, ಜುಲೈ 20 ರಿಂದ 70 ರೂ. ದರ ಇದೆ. ಇಂದಿನಿಂದ 50 ರೂ.ಗೆ ಮಾರಾಟ ಮಾಡಲಾಗುವುದು.