ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ 13 ಸಾವಿರ ಸಾರಿಗೆ ಸಿಬ್ಬಂದಿಗಳನ್ನು ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿ ಮುಂಭಾಗ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ನಿಗಮದಲ್ಲಿ 2016 ರಲ್ಲಿ ಸಿಬ್ಬಂದಿ ನೇಮಕಾತಿ ಮಾಡಲಾಗಿತ್ತು. ಸುಮಾರು 8 ವರ್ಷಗಳಿಂದ ನೇಮಕಾತಿಯೇ ಮಾಡಿಲ್ಲ. ಹೀಗಾಗಿ ಹೊಸದಾಗಿ ಸಿಬ್ಬಂದಿ ನೇಮಕಾತಿ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಸಮ್ಮತಿಸಿದ ಕೂಡಲೇ ಚಾಲಕರು, ನಿರ್ವಾಹಕರು ಹಾಗೂ ಮೆಕ್ಯಾನಿಕ್ ಗಳುಸೇರಿ 13 ಸಾವಿರ ಸಾರಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಾಲ್ಕು ನಿಗಮಗಳಲ್ಲಿ ಇನ್ನು ಒಂದು ವರ್ಷದ ಅವಧಿಯಲ್ಲಿ 5 ಸಾವಿರ ಹೊಸ ಬಸ್ ಗಳನ್ನು ಖರೀದಿ ಮಾಡಲಾಗುವುದು. ಬಜೆಟ್ ನಲ್ಲಿ 5,000 ಕೋಟಿ ರೂ.ಮೀಸಲಿಡಲಾಗಿದೆ. ಹೊಸದಾಗಿ ಬಿಎಂಟಿಸಿಗೆ 1 ಸಾವಿರ ಬಸ್ ಸೇರಿ ನಾಲ್ಕು ನಿಗಮಕ್ಕೆ 5 ಸಾವಿರ ಬಸ್ ಗಳನ್ನು ಖರೀದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.