ಬೆಂಗಳೂರು : ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ನೀಡಲು ಆರೋಗ್ಯ ಇಲಾಖೆಯ ‘ಗೃಹ ಆರೋಗ್ಯ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಪ್ರಾರಂಭಿಕವಾಗಿ ಕೋಲಾರ ಜಿಲ್ಲೆಯಲ್ಲಿ ಜಾರಿ ಮಾಡಲಾಗುವುದು. ಜನವರಿ 2025 ರಿಂದ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತದೆ.
ಏನಿದರ ಉದ್ದೇಶ
ಈ ಯೋಜನೆಯಡಿ ಗ್ರಾಮೀಣ ಪ್ರದೇಶದ 30 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿಪಿ), ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಾಥಮಿಕ ಹಂತದ ತಪಾಸಣೆಗಳು ಮನೆ ಬಾಗಿಲಲ್ಲಿ ದೊರೆಯಲಿವೆ.
ಗೃಹ ಆರೋಗ್ಯ ಯೋಜನೆಯ ಪ್ರಮುಖ ಅಂಶಗಳು
ಆರೋಗ್ಯ ಕಾರ್ಯಕರ್ತರ ತಂಡ ಗ್ರಾಮೀಣ ಭಾಗದ 30 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರ ಮನೆಗಳಿಗೆ ಭೇಟಿ ನೀಡಿ ಪ್ರಮುಖ 6 ಅಸಾಂಕ್ರಾಮಿಕ ರೋಗಗಳಾದ ಮಧುಮೇಹ (ಸಕ್ಕರೆ ಕಾಯಿಲೆ), ಅಧಿಕ ರಕ್ತದೊತ್ತಡ (BP) ಸಂಬಂಧ ಪರೀಕ್ಷೆ ಮತ್ತು ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದ ತಪಾಸಣೆ
ಆಯುಷ್ ಪದ್ಧತಿಯ ಸಂವರ್ಧನೆ ಮೂಲಕ ಜೀವನಶೈಲಿ ಮಾರ್ಪಾಡು ಹಾಗೂ ಚಿಕಿತ್ಸಾ ಕ್ರಮಗಳಿಂದ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ನಿರ್ವಹಣೆಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಾಯಿಲೆಗಳಿಗೆ ವೈದ್ಯರ ಸಲಹೆಯಂತೆ ನಿರಂತರ ಉಚಿತ ಔಷಧಿಗಳ ವಿತರಣೆ
ಅಸಾಂಕ್ರಾಮಿಕ ರೋಗಗಳಿಗೆ ಪ್ರಮುಖ ಕಾರಣಗಳಾದ – ಸ್ಟೀಪ್ ಅಗ್ನಿಯಾ (ನಿದ್ರೆಯಲ್ಲಿ ಉಸಿರುಕಟ್ಟುವಿಕೆ), BMI ಅಸಮತೋಲನ, ಧೂಮಪಾನ ಮತ್ತು ಮದ್ಯಪಾನ, ವ್ಯಸನ ಮುಕ್ತದ ಬಗ್ಗೆ ಆರೋಗ್ಯ ಶಿಕ್ಷಣ ಮತ್ತು ಆಪ್ತ ಸಮಾಲೋಚನೆಯ ಮುಖಾಂತರ ನಿಯಂತ್ರಣಕ್ಕೆ ಕ್ರಮ
ಅಸಾಂಕ್ರಾಮಿಕ ರೋಗಗಳನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ, ನಿರಂತರ ಉಚಿತ ತಪಾಸಣೆ ಹಾಗೂ ಚಿಕಿತ್ಸೆಯ ಮೂಲಕ ಅಡ್ಡ ಪರಿಣಾಮ ಮತ್ತು ಅಕಾಲಿಕ ಮರಣ ತಡೆಗಟ್ಟುವುದು ಯೋಜನೆಯ ಪ್ರಮುಖ ಉದ್ದೇಶ.
ಪ್ರಾರಂಭಿಕವಾಗಿ ಕೋಲಾರ ಜಿಲ್ಲೆಯಲ್ಲಿ ಜಾರಿ ಜನವರಿ 2025 ರಿಂದ ರಾಜ್ಯಾದ್ಯಂತ ವಿಸ್ತರಣೆ