ಬೆಂಗಳೂರು : ಶೀಘ್ರವೇ ಕೆಎಸ್ ಆರ್ ಟಿಸಿ ಹಾಗೂ ವಿವಿಧ ನಿಗಮಗಳ ಬಸ್ ಗಳ ಟಿಕೆಟ್ ದರ ಹೆಚ್ಚಳವಾಗಲಿರುವ ಬಗ್ಗೆ ಸಾರಿಗೆ ಸಚಿವರು ಸುಳಿವು ನೀಡಿದ್ದರು. ಈ ಬೆನ್ನಲ್ಲೇ ಇದಕ್ಕೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೆ.ಎಸ್.ಆರ್.ಟಿ.ಸಿ ಟಿಕೆಟ್ ದರಗಳನ್ನು ಹೆಚ್ಚಿಸುವ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದರು.
ಡೀಸೆಲ್ ಪೆಟ್ರೋಲ್ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸಾರಿಗೆ ಬಸ್ ದರ ಹೆಚ್ಚಳ ಮಾಡಲಾಗುತ್ತದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.ಈ ವರ್ಷ ಗ್ಯಾರಂಟಿ ಯೋಜನೆಗಳಿಗಾಗಿ 60 ಸಾವಿರ ಕೋಟಿ ಅನುದಾನ ಮೀಸಲಿರಿಸಿದ್ದು, ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದರು.
ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಒಂದು ಬ್ಯಾರೆಲ್ಗೆ ಕಚ್ಛಾತೈಲ ಬೆಲೆ 113 ಡಾಲರ್ ಇತ್ತು, ಈಗ ಎಷ್ಟಾಗಿದೆ ಗೊತ್ತೆ? 2015 ರಲ್ಲಿ 50 ಡಾಲರ್ಗೆ ಇಳಿದಾಗಲೂ ಮೋದಿ ಅವರ ಸರ್ಕಾರ ಬೆಲೆಯನ್ನು ಕಡಿಮೆ ಮಾಡಿಲ್ಲ. ಒಮ್ಮೆ 27 ಡಾಲರ್ಗೂ ಕಚ್ಛಾತೈದ ಬೆಲೆ ಇಳಿದಿತ್ತು. ಆಗ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಿದ್ದರೆ? ಬಿಜೆಪಿ ಹೆಚ್ಚಿಸಿದರೆ ಮಾಧ್ಯಮದವರು ಸುಮ್ಮನಿರುತ್ತಾರೆ. ಆರೋಪಗಳನ್ನು ವಸ್ತುಸ್ಥಿತಿಯ ಮೇಲೆ ಮಾಡಬೇಕು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ಒಂದು ಲೀಟರ್ ಪೆಟ್ರೋಲ್ ಬೆಲೆ 72 ರೂ.ಗಳಾಗಿತ್ತು. ಇಂದು 102 ರೂ.ಗಳಾಗಲು ಯಾರು ಕಾರಣ? ಒಂದು ಕಡೆ ಕಚ್ಛಾತೈಲದ ಬೆಲೆ ಕಡಿಮೆಯಾಗಿದ್ದರೆ, ಮತ್ತೊಂದೆಡೆ ಪೆಟ್ರೋಲ್ ಬೆಲೆ ಹೆಚ್ಚು ಮಾಡಲಾಗಿದೆ. ಮನಮೋಹನ್ ಸಿಂಗ್ ಅವರು ಇದ್ದಾಗ 103 ಕಚ್ಛಾತೈಲದ ಬೆಲೆ ಡಾಲರ್ ಬೆಲೆ ಇದ್ದಾಗ ಸಹಾಯಧನವನ್ನೂ ನೀಡಿ ಪೆಟ್ರೋಲ್ ಬೆಲೆಯನ್ನೂ ಇಳಿಸಿದ್ದರು. ನರೇಂದ್ರ ಮೋದಿಯವರ ಕಾಲದಲ್ಲಿ ಹೆಚ್ಚಾಗಿದೆ, ಯಾಕೆ? ನಾವು ಬೆಲೆ ಏರಿಕೆ ಮಾಡಿರುವುದು ಅಭಿವೃದ್ಧಿಗಾಗಿ. ಡೀಸಲ್ – ಪೆಟ್ರೋಲ್ ಮೇಲೆ 3. ರೂ ಹೆಚ್ಚು ಮಾಡಿದರೂ ನೆರೆಯ ರಾಜ್ಯಗಳಿಗಿಂತಲೂ ನಮ್ಮಲ್ಲಿ ಬೆಲೆ ಕಡಿಮೆ ಇದೆ ಎಂದರು.
ಸಂಡೂರಿನಲ್ಲಿ ಗಣಿಗಾರಿಕೆ ಮಾಡಲು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರೇ ಒಂದು ಕಾಲದಲ್ಲಿ ವಿರೋಧಿಸಿ ಈಗ ಅವರೇ ಗಣಿಗಾರಿಕೆ ಮಾಡಿ ಎನ್ನುತ್ತಿದ್ದಾರೆ. ಸರ್ಕಾರದ ನಿರ್ಧಾರದ ಬಗ್ಗೆ ಪರಿಶೀಲಿಸಲಾಗುವುದು. ಕೊಪ್ಪಳ ತಾಲ್ಲೂಕಿನ ನವಲೆಯಲ್ಲಿ ತುಂಗಭದ್ರಾ ಬ್ಯಾಲೆನ್ಸಿಂಗ್ ರಿಸರ್ವಾಯ್ರ್ ನಿರ್ಮಿಸುವ ಸಂಬಂಧ ತೆಲಂಗಾಣ, ಆಂಧ್ರಪ್ರದೇಶದ ಮಧ್ಯೆ ಮಾತುಕತೆ ಪ್ರಾರಂಭ ಮಾಡಿ ಡಿಪಿಆರ್ ಮಾಡಿಸಲಾಗುವುದು. ಅಂಗನವಾಡಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಬಂಧಿಸಿದಂತೆ ಎರಡೂ ಇಲಾಖೆಗಳು ಸಭೆ ಸೇರಿ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸೂಚಿಸಿದ್ದು, ಸೋಮವಾರ ಇದಕ್ಕೆ ಸಂಬಂಧಿಸಿದಂತೆ ಸಭೆ ಕರೆಯಲಾಗುವುದು ಎಂದರು.