ಬೆಂಗಳೂರು : ಬೆಂಗಳೂರಿನ ನೇಮಕಾತಿ ಪ್ರಧಾನ ಕಚೇರಿಯ ಹೆಚ್ಚುವರಿ ಮಹಾ ನಿರ್ದೇಶಕರು ಹಾಗೂ ಬೆಳಗಾವಿಯ ಸೇನಾ ನೇಮಕಾತಿ ಕಚೇರಿ ವತಿಯಿಂದ ಬೆಳಗಾವಿ, ಕಲಬುರಗಿ, ಬೀದರ್, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಶಾರ್ಟ್ಲಿಸ್ಟ್ ಮಾಡಲಾದ ಪುರುಷ ಅಭ್ಯರ್ಥಿಗಳಿಗಾಗಿ ಡಿಸೆಂಬರ್ 04 ರಿಂದ 16 ರವರೆಗೆ ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ರ‍್ಯಾಲಿಯಲ್ಲಿ ಅಗ್ನಿವೀರ್ ಜೆನರಲ್ ಡ್ಯೂಟಿ, ಅಗ್ನಿವೀರ್ ತಾಂತ್ರಿಕ, ಅಗ್ನಿವೀರ್ ಟ್ರೇಡ್ಸ್ಮನ್, ಅಗ್ನಿವೀರ್ ಕ್ಲರ್ಕ್, ಸ್ಟೋರ್ ಕೀಪರ್, ತಾಂತ್ರಿಕ ವರ್ಗ ಮುಂತಾದ ಹುದ್ದೆಗಳಿಗೆ 8ನೇ ತರಗತಿ ಹಾಗೂ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಹುದ್ದೆಗೆ ನಿಗದಿಪಡಿಸಿದ ವಯೋಮಾನ, ವಿದ್ಯಾರ್ಹತೆ ಮುಂತಾದ ಅರ್ಹತಾ ಮಾನದಂಡಗಳ ಕುರಿತು ಫೆಬ್ರವರಿಯಲ್ಲಿ ಬೆಳಗಾವಿ ಸೇನಾ ನೇಮಕಾತಿ ಕಚೇರಿಯಿಂದ ಹೊರಡಿಸಲಾದ ಅಧಿಸೂಚನೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ.
ನೇಮಕಾತಿ ಕುರಿತ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶವನ್ನು www.joinindianarmy.nic.in ನಲ್ಲಿ ಪ್ರಕಟಿಸಲಾಗಿದೆ. ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಅಕ್ಟೋಬರ್ 20 ರಿಂದ ಪ್ರವೇಶ ಪತ್ರವನ್ನು ನೀಡಲಾಗುತ್ತಿದ್ದು, ಸೇನಾ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ರಿಜಿಸ್ಟರ್ ಮಾಡಿದ ತಮ್ಮ ಇ-ಮೇಲ್ ಐಡಿ ಹಾಗೂ ವೈಯಕ್ತಿಕ ಮಾಹಿತಿ ನೀಡಿ ಲಾಗಿನ್ ಮಾಡಿ, ಪ್ರವೇಶ ಪತ್ರ ಪಡೆಯಬಹುದು.
ಅಗ್ನಿವೀರ್ ನೇಮಕಾತಿಯು ಸಂಪೂರ್ಣ ಮೆರಿಟ್ ಆಧಾರಿತವಾಗಿದ್ದು, ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡುವುದಾಗಲಿ, ಮೂಲ ದಾಖಲೆಗಳನ್ನು ಸಲ್ಲಿಸುವುದಾಗಲಿ ಮಾಡಬಾರದು. ಒಂದು ವೇಳೆ ಯಾರದರೂ ಆಮೀಷ ತೋರಿದಲ್ಲಿ ಅಂತವರ ವಿರುದ್ಧ ಹತ್ತಿರದ ಪೊಲೀಸ್ ಠಾಣೆಗೆ ದೂರು ದಾಖಲಿಸಬಹುದು. ಅಥವಾ ಬೆಳಗಾವಿ ಸೇನಾ ನೇಮಕಾತಿ ಕಚೇರಿಯ ಇ-ಮೇಲ್ ಐಡಿ: arobgm@gmail.com ಗೆ ವರದಿ ಮಾಡಬಹುದು.ರ‍್ಯಾಲಿಗೆ ಆಗಮಿಸುವ ಅಭ್ಯರ್ಥಿಗಳು ತಮ್ಮ ಆಧಾರ್ ಜೋಡಣೆ ಮಾಡಿದ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಯಾವುದೇ ಸುಳ್ಳು ಅಥವಾ ತಪ್ಪು ಮಾಹಿತಿಯನ್ನು ನೇಮಕಾತಿಗಾಗಿ ನೀಡಬಾರದು. ಯಾವುದೇ ಉದ್ದೀಪನ ಔಷಧಿಗಳ ಸೇವನೆ ಮಾಡಬಾರದು. ಯಾವುದೇ ರೀತಿಯ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಫೆಬ್ರವರಿ 15 ರಂದು ಹೊರಡಿಸಿದ ಸೇನಾ ನೇಮಕಾತಿ ಅಧಿಸೂಚನೆಯನ್ನು ವಿವರವಾಗಿ ಓದಿಕೊಳ್ಳಬೇಕು ಎಂದು ನೇಮಕಾತಿ ನಿರ್ದೇಶಕರಾದ ಕರ್ನಲ್ ನಿಶಾಂತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.