![](https://kannadadunia.com/wp-content/uploads/2024/02/Ration-card.jpg)
ಬೆಂಗಳೂರು : ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಹೊಸ ಆದ್ಯತಾ ಪಡಿತರ ಚೀಟಿಯನ್ನು ಕೋರಿ ಸಲ್ಲಿಸಲಾಗಿರುವ 2,95,986 ಅರ್ಜಿಗಳನ್ನು ಇದೇ ಮಾರ್ಚ್ 31ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಏಪ್ರಿಲ್ 1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಗುರುವಾರವಿಧಾನಸಭೆಯ ಕಲಾಪದಲ್ಲಿ ಪ್ರಶ್ನೋತ್ತರ ವೇಳೆ ಈ ಕುರಿತು ಮಾಹಿತಿ ನೀಡಿರುವ ಸಚಿವರು, ಕಳೆದ ಸರ್ಕಾರದ ಅವಧಿಯಲ್ಲೇ ಹೊಸ ಪಡಿತರ ಚೀಟಿಗಾಗಿ 2.95 ಲಕ್ಷ ಅರ್ಜಿಗಳು ಬಂದಿವೆ. ಇದರಲ್ಲಿ ಈಗಾಗಲೇ 57 ಸಾವಿರ ಕಾರ್ಡ್ ಗಳನ್ನು ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ಪರಿಶೀಲಿಸಿ ಮಾರ್ಚ್ 31 ರೊಳಗೆ ಅರ್ಹರಿಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಬಿಪಿಎಲ್ ಕಾರ್ಡ್ ಪಡೆಯಲು ನಾಲ್ಕು ಚಕ್ರ ವಾಹನ ಹೊಂದಿರಬಾರದು ಎಂಬ ಮಾನದಂಡ ಇತ್ತು. ಇದೀಗ ಈ ಮಾನದಂಡವನ್ನು ತೆಗೆದುಹಾಕಲಾಗಿದೆ. ಈಗಾಗಲೇ ಎಪಿಎಲ್ ಗೆ ಪರಿವರ್ತನೆಯಾಗಿರುವ ಇಂತಹ ಕಾರ್ಡ್ ಗಳನ್ನು ಬಿಪಿಎಲ್ ಆಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದ್ದಾರೆ.