alex Certify GOOD NEWS : ಸ್ವಂತ ಸೂರು ಇಲ್ಲದವರಿಗೆ ಗುಡ್ ನ್ಯೂಸ್ : ನಿವೇಶನ ನೀಡಲು ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS : ಸ್ವಂತ ಸೂರು ಇಲ್ಲದವರಿಗೆ ಗುಡ್ ನ್ಯೂಸ್ : ನಿವೇಶನ ನೀಡಲು ಸೂಚನೆ

ಶಿವಮೊಗ್ಗ : ಬಡವರು, ಮಧ್ಯಮವರ್ಗದವರಿಗೆ ಸೂಡಾದಿಂದ ಸರ್ಕಾರಿ ಲೇಔಟ್‍ಗಳನ್ನು ಸಿದ್ದಪಡಿಸಿ ನೀಡಬೇಕೆಂದು ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವರಾದ ಬಿ ಎಸ್ ಸುರೇಶ ಸೂಡಾ ಆಯುಕ್ತರಿಗೆ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಸಾಮಾನ್ಯರಿಗೆ ಅವರ ಕೈಗೆಟುಕುವ ದರದಲ್ಲಿ ನಿವೇಶನ ಹಂಚಿಕೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಕೇವಲ ಖಾಸಗಿಯವರಿಗೆ ಅನುಮತಿ ನೀಡುವುದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಕೆಲಸವಲ್ಲ. ಶೀಘ್ರದಲ್ಲಿ ನಗರದಲ್ಲಿ ಸ್ಥಳ ಹುಡುಕಿ 250 ರಿಂದ 500 ಎಕರೆಯ ಸರ್ಕಾರಿ ಲೇಔಟ್ ಸಿದ್ದಪಡಿಸಿ ಸಾರ್ವಜನಿಕರಿಗೆ ನೀಡಬೇಕು. ಅಲ್ಲಿಯವರೆಗೆ ಖಾಸಗಿಯವರಿಗೆ ಅನುಮತಿ ನೀಡುವ ಹಾಗಿಲ್ಲ ಎಂದು ತಾಕೀತು ಮಾಡಿದರು.

ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗದಲ್ಲಿ ಸರ್ಕಾರಿ ಲೇಔಟ್ ತುಂಬಾ ಕಡಿಮೆ ಇದೆ. ಸ್ಥಳೀಯ ಶಾಸಕರು, ಸಂಸದರು ಮತ್ತು ಡಿಸಿ ಯವರೊಂದಿಗೆ ಸೂಡಾ ಆಯುಕ್ತರು ಚರ್ಚಿಸಿ ಸ್ಥಳ ಗುರುತಿಸಿ ಲೇಔಟ್ ಅಭಿವೃದ್ದಿಪಡಿಸಬೇಕು ಹಾಗೂ ಸಿಡಿಪಿ ಯನ್ನು ಶೀಘ್ರದಲ್ಲಿ ಸಿದ್ದಪಡಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದರು.

ಪ್ರಾಧಿಕಾರದಿಂದ ಸರ್ಕಾರಿ ಲೇಔಟ್‍ಗಳು, ರಸ್ತೆಗಳು, ಕೆರೆ ಅಭಿವೃದ್ದಿ ಸೇರಿದಂತೆ ಅಭಿವೃದ್ದಿ ಕೆಲಸಗಳು ಆಗಬೇಕು. ಡಿಪಿಆರ್ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಎಲ್ಲ ಕೆಲಸಗಳು ಪಾರದರ್ಶಕವಾಗಿ ನಡೆಯಬೇಕು ಎಂದರು

ಶಾಸಕರಾದ ಎಸ್.ಎನ್.ಚನ್ನಬಸಪ್ಪ ನವರು ಆಶ್ರಯ ಯೋಜನೆಯಡಿ ಬಂದಿರುವ ಅರ್ಜಿದಾರರಿಗೆ ನಿವೇಶನ ಹಂಚಿಕೆ ಕುರಿತು ಪ್ರಸ್ತಾಪಿಸಿದರು. ಈ ಯೋಜನೆಯಡಿ ಬಂದಿರುವ ಸುಮಾರು 3 ಸಾವಿರ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಸಚಿವರು ಸೂಚನೆ ನೀಡಿದರು.

ಪಾಲಿಕೆ ಆಯುಕ್ತರು ಮತ್ತು ಸ್ಮಾರ್ಟ್‍ಸಿಟಿ ಎಂಡಿ ಮಾಯಣ್ಣ ಗೌಡ ಮಾತನಾಡಿ, ಸ್ಮಾರ್ಟ್‍ಸಿಗೆ ಸಂಬಂಧಿಸಿದಂತೆ ರೂ.990 ಕೋಟಿ ಹಣ ಮಂಜೂರಾಗಿದ್ದು 71 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಅದರಲ್ಲಿ 67 ಕಾಮಗಾರಿಗಳು ಪೂರ್ಣಗೊಂಡಿವೆ. ರೂ.920 ಕೋಟಿ ಪ್ರಗತಿಯಾಗಿದ್ದು ಶೇ.97 ಭೌತಿಕ ಮತ್ತು ಶೇ.92 ಆರ್ಥಿಕ ಪ್ರಗತಿಯಾಗಿದೆ. 4 ಕಾಮಗಾರಿ ಪ್ರಗತಿಯಲ್ಲಿದೆ ಎಂದರು

ಸಚಿವರು ನಗರದ ಸ್ಮಾರ್ಟ್‍ಸಿಟಿ ಯೋಜನೆಯ ಕುರಿತು ಅನೇಕ ದೂರುಗಳು ಬಂದಿವೆ. ಯುಜಿ ಕೇಬಲ್, ರಸ್ತೆ, ಚರಂಡಿ ಇತರೆ ಕಾಮಗಾರಿ ಬಗ್ಗೆ ಸಾಕಷ್ಟು ದೂರುಗಳಿದ್ದು, ಸಮಗ್ರವಾಗಿ ಈ ದೂರುಗಳ ಕುರಿತು ಪರಿಶೀಲನೆ ನಡೆಸಿ, ಈ ಲೋಪಗಳು ಸರಿಯಾದ ಮೇಲೆ ಬಾಕಿ ಹಣ ಪಾವತಿಸಬೇಕು. ಕಳಪೆ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.ಪಾಲಿಕೆ ವ್ಯಾಪ್ತಿಯಲ್ಲಿ 18 ಸಾವಿರ ಬೀದಿ ದೀಪ ಅಳವಡಿಕೆ ಆಗಿದೆ. ಶೇ.98 ಬೀದಿದೀಪಗಳು ಉರಿಯಬೇಕು. ಹೆಚ್ಚುವರಿ ಬೀದಿ ದೀಪಗಳನ್ನು ಅಳವಡಿಸಬೇಕು. ಸಮರ್ಪಕವಾಗಿ ನಿರ್ವಹಿಸಬೇಕು. ಹೆಚ್ಚುವರಿಗಯಾಗಿ ಅನುದಾನ ಬೇಕಾದಲ್ಲಿ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.

ಕೆರೆಗಳು, ಪಾರ್ಕ್ ಅಭಿವೃದ್ದಿ ಸೇರಿದಂತೆ ಪಾಲಿಕೆಗೆ ರೂ.25 ಕೋಟಿ ಹಣವನ್ನು ಮಂಜೂರು ಮಾಡಿದ್ದು ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದರು. ಯುಜಿಡಿ ಗೆ ರೂ.220 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದು, ಹಣ ಮಂಜೂರು ಮಾಡಲಾಗುವುದು, ರಿಸ್ಟೋರೇಷನ್ ಕಾಮಗಾರಿಯನ್ನು ಸಹ ಸಮರ್ಪಕವಾಗಿ ಮಾಡಬೇಕೆಂದರು.

ಪಾಲಿಕೆ, ನಗರಸಭೆ, ಪುರಸಭೆ, ಸ್ಥಳೀಯ ಸಂಸ್ಥೆಗಳಲ್ಲಿ ಕರ ವಸೂಲಾತಿಯನ್ನು ಕಟ್ಟುನಿಟ್ಟಾಗಿ ಮಾಡಬೇಕು. ಹೊಸ ನಿಯಮದಂತೆ ನಿರ್ವಹಿಸಬೇಕು. ಇಲ್ಲವಾದಲ್ಲಿ ಶಿಸ್ತಿನ ಕ್ರಮ ವಹಿಸಲಾಗುವುದು. ಕುಡಿಯುವ ನೀರು, ಕಸ ನಿರ್ವಹಣೆ ಹಾಗೂ ಮುಖ್ಯವಾಗಿ ಎಲ್ಲಿಯೂ ನೀರು ಕಲುಷಿತವಾಗದಂತೆ ಕ್ರಮ ವಹಿಸಬೇಕೆಂದ ಅವರು. ಯುಜಿಡಿ ಪೈಪ್‍ಗಳು ಒಡೆದು ಹಾಳಾಗಿದ್ದರೆ ತಕ್ಷಣವೇ ಬೇರೆ ಹಾಕಬೇಕು. ಕುಡಿಯುವ ನೀರು ಕಲುಷಿತವಾಗದಂತೆ ಎಚ್ಚರ ವಹಿಸಬೇಕೆಂದ ಸೂಚಿಸಿದರು.ನಗರ ಭಾಗದಲ್ಲಿ ಜನವರಿವರೆಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆನಂತರ ಕುಡಿಯುವ ನೀರನ್ನು ಉತ್ತಮವಾಗಿ ನಿರ್ವಹಿಸಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕೆಂದು ಸೂಚನೆ ನೀಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...