ಬೆಳಗಾವಿ : ರಾಜ್ಯದ ಬಡಜನತೆಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಇಂದಿರಾ ಕ್ಯಾಂಟೀನ್ ಗೆ ಕಾಯಕಲ್ಪ ನೀಡುತ್ತಿದ್ದು, ಹಳೆಯ ಕ್ಯಾಂಟೀನ್ ಗಳ ಪುನಶ್ಚೇತನ ಹಾಗೂ 188 ಹೊಸ ಕ್ಯಾಂಟೀನ್ ಪ್ರಾರಂಭಿಸಲು 240 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದ್ದೇವೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
ಸುವರ್ಣ ವಿಧಾನ ಸೌಧದ ಸೆಂಟ್ರಲ್ ಹಾಲ್ ನಲ್ಲಿ (ಅ.06) ನಡೆದ ಬೆಳಗಾವಿ ವಿಭಾಗದ ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ನಿರ್ದೇಶನದಂತೆ ವಿಭಾಗ ಮಟ್ಟದಲ್ಲಿ ಬರುವ ಎಲ್ಲ ಜಿಲ್ಲೆಗಳಲ್ಲಿ ನಿಗದಿತ ಅವಧಿಯೊಳಗೆ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು. ಕುಡಿಯುವ ನೀರು ಪೂರೈಕೆ, ಬೋರ್ವೆಲ್ ಗಳ ದುರಸ್ಥಿ, ಪೈಪ್ ಲೈನ್ ಅಳವಡಿಕೆ ಸೇರಿದಂತೆ ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸಬೇಕು ಎಂದಿದ್ದಾರೆ.
ಸರ್ಕಾರದ ಪ್ರಾಯೋಜಿತ ಯೋಜನೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳ ಸಮನ್ವಯದೊಂದಿಗೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಸರ್ಕಾರದ ಯೋಜನೆಗಳ ಅನುಷ್ಟಾನಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇಂದಿರಾ ಕ್ಯಾಂಟೀನ್ ಗಳ ನಿರ್ಲಕ್ಷ್ಯ ತೋರಿದಂತೆ ಸೂಚನೆ:
ಬೆಳಗಾವಿಯ ವಿಭಾಗದಲ್ಲಿನ ಬಾಗಲಕೋಟೆ, ಜಮಖಂಡಿ, ಮುಧೋಳ ತಾಲ್ಲೂಕಿನ ಹೊಸ ಇಂದಿರಾ ಕ್ಯಾಂಟೀನ್ ಪ್ರಾರಂಭಕ್ಕೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. ನಿಗದಿತ ಅವಧಿಯೊಳಗೆ ಟೆಂಡರ್ ಕರೆದು ಕ್ಯಾಂಟೀನ್ ಪ್ರಾರಂಭಿಸಬೇಕು.
ಬಡವರಿಗೆ ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಅವಶ್ಯವಿರುವ ಸ್ಥಳಗಳಲ್ಲಿ ತಕ್ಷಣ ಕ್ಯಾಂಟೀನ್ ಪ್ರಾರಂಭಿಸಬೇಕು. ಈ ಕುರಿತು ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು ಎಂದು ಬಿ.ಎಸ್.ಸುರೇಶ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕ್ಯಾಂಟೀನ್ ಪ್ರಾರಂಭಕ್ಕೆ ಸ್ಥಳ ಗುರುತಿಸಿ:
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 9 ಇಂದಿರಾ ಕ್ಯಾಂಟೀನ್ ಗಳಿವೆ. ಇನ್ನು ಹೊಸದಾಗಿ ಒಟ್ಟು 28 ಇಂದಿರಾ ಕ್ಯಾಂಟೀನ್ ಗಳ ಪ್ರಾರಂಭಕ್ಕೆ ಸ್ಥಳ ಗುರುತಿಸಲಾಗಿದೆ ಎಂದು ನಗರಾಭಿವೃದ್ಧಿ ಕೋಶದಿಂದ ಯೋಜನಾ ನಿರ್ದೇಶಕರಾದ ಮಲ್ಲಿಕಾರ್ಜುನ ಕಲಾದಗಿ ಅವರು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ.ಎಸ್.ಸುರೇಶ್ ಅವರು
ಗೋಕಾಕ್ ತಾಲೂಕಿನಲ್ಲಿ ಈಗಾಗಲೇ ಒಂದು ಕ್ಯಾಂಟೀನ್ ಇದೆ. ಸರ್ಕಾರದ ಮಾರ್ಗಸೂಚಿಯ ಅನ್ವಯ 25 ಸಾವಿರ ಜನಸಂಖ್ಯೆಯಿರುವ ಸ್ಥಳಗಳಲ್ಲಿ 1 ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು. ಗೋಕಾಕ್ ವ್ಯಾಪ್ತಿಯಲ್ಲಿ 79 ಸಾವಿರ ಜನಸಂಖ್ಯೆಯಿರುವ ಸ್ಥಳಗಳಿವೆ ಕೂಡಲೇ ಅಂತಹ ಸ್ಥಳಗಳನ್ನು ಪರಿಶೀಲಿಸಿ ಕ್ಯಾಂಟೀನ್ ಪ್ರಾರಂಭಕ್ಕೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯತಿಗಳನ್ನು ಮೇಲ್ದರ್ಜೆಗೆರಿಸಿದ ಪಟ್ಟಣ ಪಂಚಾಯಿತಿಗಳಲ್ಲಿ ಜನಸಂಖ್ಯಾ ಅನುಗುಣವಾಗಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು. ಕ್ಯಾಂಟೀನ್ ಗಳ ಪ್ರಾರಂಭಕ್ಕೆ ಅಧಿಕಾರಿಗಳ ಇಚ್ಛಾಶಕ್ತಿ ತುಂಬಾ ಮುಖ್ಯ ಹಾಗಾಗಿ ಯಾವುದೇ ಅಧಿಕಾರಿಗಳು ವಿಳಂಬ ತೋರಬಾರದು ಎಂದು ಸೂಚಿಸಿದರು.
ನಿರ್ಲಕ್ಷಿಸಿದರೆ ನೋಟಿಸ್ ಜಾರಿ:
ಧಾರವಾಡ ವ್ಯಾಪ್ತಿಯಲ್ಲಿ ಈಗಾಗಲೇ 8 ಹಳೆಯ ಕ್ಯಾಂಟೀನ್ ಗಳಿವೆ 20 ಹೊಸ ಕ್ಯಾಂಟೀನ್ ಪ್ರಾರಂಭಕ್ಕೆ ಸ್ಥಳ ಗುರುತಿಸಿ, ಟೆಂಡರ್ ಆಹ್ವಾನಿಸಲಾಗುವುದು. ಅದೇ ರೀತಿಯಲ್ಲಿ ಹಾವೇರಿಯಲ್ಲಿ 3 ಇಂದಿರಾ ಕ್ಯಾಂಟೀನ್ ಗಳಿವೆ ಮತ್ತು 7 ಹೊಸ ಕ್ಯಾಂಟೀನ್ ಪ್ರಾರಂಭಕ್ಕೆ ಸ್ಥಳ ಗುರುತಿಸಿ ಸದ್ಯದಲ್ಲೇ ಟೆಂಡರ್ ಕರೆದು ಪ್ರಾರಂಭಕ್ಕೆ ಸೂಚಿಸಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ವಿವರಿಸಿದರು.
ಇಂದಿರಾ ಕ್ಯಾಂಟೀನ್ ಗಳ ಪ್ರಾರಂಭಕ್ಕೆ ಸರ್ಕಾರದ ಹೊಸ ನಿರ್ದೇಶನದಂತೆ ಯಾರು ಕ್ರಮ ವಹಿಸಿಲ್ಲ ಅಂತಹ ಅಧಿಕಾರಿಗಳ ವಿರುದ್ಧ ಕೂಡಲೇ ನೋಟಿಸ್ ಜಾರಿ ಮಾಡುವಂತೆ ಸಚಿವ ಬಿ.ಎಸ್ ಸುರೇಶ್ ಅವರು ಸೂಚಿಸಿದರು.