ಬೆಂಗಳೂರು : ರಾಜ್ಯದ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, 1 ರಿಂದ 9 ನೇ ತರಗತಿ ಶಾಲಾ ಮಕ್ಕಳಿಗೆ ಕಲಿಕಾ ಬಲವರ್ಧನೆ ಕಾರ್ಯಕ್ರಮ ಅನುಷ್ಠಾನಗೊಳಿಸಲು 78.13 ಕೋಟಿ ರೂ. ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಹೆಚ್.ಕೆ.ಪಾಟೀಲ್, ಕೊರೊನಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉಂಟಾದ ಅನಾನುಕೂಲ ನಿವಾರಣೆ ಮಾಡಲು ಬಜೆಟ್ ನಲ್ಲಿ ಕಲಿಕಾ ಬಲವರ್ಧನೆ ಕಾರ್ಯಕ್ರಮ ಘೋಷಿಸಲಾಗಿತ್ತು. ಕಾರ್ಯಕ್ರಮದ ಮೂಲಕ ಮಕ್ಕಳಿಗೆ ವಿಶೇಷ ಕಲಿಕೆಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ಸಚಿವ ಸಂಪುಟದ ಒಪ್ಪಿಗೆ ದೊರೆತಿದೆ ಎಂದು ತಿಳಿಸಿದ್ದಾರೆ.
ಇನ್ನು ರಾಜ್ಯಾದ್ಯಂತ ಮತ್ತೆ 188 ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಹಾಗೂ ಹಾಲಿ ಇರುವ ಕ್ಯಾಂಟೀನ್ ಗಳ ದುರಸ್ತಿ, ನವೀಕರಣ ಹಾಗೂ ಗುಣಮಟ್ಟ ಉತ್ತಮಪಡಿಸಲು ಒಟ್ಟು 21 ಕೋಟಿ ರೂ. ಅನುದಾನ ಮೀಸಲಿಡಲು ತೀರ್ಮಾನಿಸಲಾಗಿದೆ.
ಬಿಬಿಎಂಪಿ ಹೊರತುಪಡಿಸಿ ಉಳಿದೆಡೆಯ ಇಂದಿರಾ ಕ್ಯಾಂಟೀನ್ ಗಳಲ್ಲಿ ಆಯಾ ಭಾಗದ ಸ್ಥಳೀಯ ಆಹಾರಕ್ಕೆ ಆಧ್ಯತೆ ನೀಡಿ ಮೆನು ಬದಲಿಸುವುದು, ಮೆನುವಿನಲ್ಲಿ ಸಿಹಿ ಹಾಗೂ ಎರಡು ರೀತಿಯ ಪಲ್ಯ ಸೇರಿಸಲು ತೀರ್ಮಾನಿಸಲಾಗಿದೆ. ಒಂದು ಊಟದ ಬೆಲೆ ಇಂದಿರಾ ಕ್ಯಾಂಟೀನ್ ನಲ್ಲಿ 57 ರಿಂದ 62 ರೂಪಾಯಿಗೆ ಏರಿಕೆ ಆಗಲಿದೆ. ಈ ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು, ಸಾರ್ವಜನಿಕರಿಗೆ ಎಂದಿನಂತೆ ಬೆಳಗಿನ ತಿಂಡಿ 5 ರೂ. ಮಧ್ಯಾಹ್ನದ ಊಟ 10 ರೂ. ಹಾಗೂ ರಾತ್ರಿ ಊಟ 10 ರೂ.ಗಳಿಗೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.