
ಬೆಂಗಳೂರು : ಹಳೆಯ ಪಿಂಚಣಿ ಜಾರಿಯ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದ್ದು, ಡಿಸೆಂಬರ್ ನಲ್ಲಿ ಎನ್ ಪಿಎಸ್ ರದ್ದು ಮಾಡುವ ಕುರಿತು ಘೋಷಣೆ ಮಾಡಲಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಎನ್ ಪಿಎಸ್ ರದ್ದು ಮಾಡುವ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ. ಡಿಸೆಂಬರ್ ನಲ್ಲಿ ಈ ಬಗ್ಗೆ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.
2.65 ಲಕ್ಷ ಎನ್ ಪಿಎಸ್ ನೌಕರರು ಹಾಗೂ ಅಷ್ಟೇ ಪ್ರಮಾಣದಲ್ಲಿ ನಿಗಮಗಳಲ್ಲಿರುವ ನೌಕರರು ವಿವಿಧ ಹಂತದ ಹೋರಾಟಗಳ ಮೂಲಕ ಎನ್ ಪಿಎಸ್ ರದ್ದತಿಗೆ ಸರ್ಕಾರದ ಗಮನ ಸೆಳೆದಿದ್ದಾರೆ. ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎನ್ ಪಿಎಸ್ ರದ್ದತಿಗೆ ಭರವಸೆ ನೀಡಿತ್ತು.
ಎನ್ ಪಿಎಸ್ ನೌಕರರ ಸಮಾವೇಶ ಡಿಸೆಂಬರ್ ನಲ್ಲಿ ನಡೆಯಲಿದ್ದು, ಆ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯರನ್ನು ಆಹ್ವಾನಿಸಲು ನೌಕರರು ಸಿದ್ಧತೆ ಮಾಡಿಕೊಂಡಿದ್ದಾರೆ. ಆ ಸಮಾವೇಶದಲ್ಲಿ ಎನ್ ಪಿಎಸ್ ರದ್ದತಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.