![](https://kannadadunia.com/wp-content/uploads/2023/06/madhu-bangarappa-dh-1013852-1627474418.jpg)
ಶಿವಮೊಗ್ಗ : ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ದೇಶೀಯ ವಿದ್ಯಾಶಾಲಾ ಸಮಿತಿ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಡಿ.ವಿ.ಎಸ್ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 2023-24ರ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಉತ್ತಮ ಹೆಜ್ಜೆ ಇಟ್ಟಿದ್ದು ಮೊದಲು 8ನೇ ತರಗತಿವರೆಗೆ ಇದ್ದ ಮೊಟ್ಟೆ ವಿತರಣೆಯನ್ನು ಇದೀಗ 10 ನೇ ತರಗತಿವರೆಗೆ ವಿಸ್ತರಿಸಿ ವಾರದಲ್ಲಿ 2 ದಿನ ಮೊಟ್ಟೆಯನ್ನು ನೀಡಲಾಗುತ್ತಿದೆ. ಕ್ಷೀರ ಭಾಗ್ಯ ಯೋಜನೆಯೊಂದಿಗೆ ಶೀಘ್ರದಲ್ಲೇ ಸಿಫ್ಆರ್ಟಿ ದೃಡೀಕರಣ ದೊರತ ತಕ್ಷಣ 60 ಲಕ್ಷ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನನ್ನ ಇಲಾಖಾ ವ್ಯಾಪ್ತಿಯಡಿ ಸರ್ಕಾರಿ, ಅನುದಾನಿತ ಸೇರಿ ಒಟ್ಟು 58 ಸಾವಿರ ಶಾಲೆಗಳು, ಅನುದಾನರಹಿತ ಸೇರಿದಂತೆ ಒಟ್ಟು 76 ಸಾವಿರ ಶಾಲೆಗಳಿದ್ದು 1 ಕೋಟಿ 2 ಲಕ್ಷ ಮಕ್ಕಳಿದ್ದಾರೆ. ವಿದ್ಯೆ ಒಂದು ಉತ್ತಮ ಸಂಪನ್ಮೂಲವಾಗಿದ್ದು ವಿದ್ಯಾದಾನ ದೇವರ ಕೆಲಸವಿದ್ದಂತೆ. ಇಂತಹ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿವೆ. ಆದರೆ ಹಂತ ಹಂತವಾಗಿ ಅವುಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲಾಗುವುದು ಎಂದರು.
53 ಸಾವಿರ ಶಿಕ್ಷಕರ ಕೊರತೆ ಇತ್ತು. ಇದರಲ್ಲಿ 13 ಸಾವಿರ ಶಿಕ್ಷಕರ ನೇಮಕ ಮಾಡಲಾಗಿದೆ. 4 ರಿಂದ 5 ಸಾವಿರ ದೈಹಿಕ ಶಿಕ್ಷಕರ ಕೊರತೆ ಇದೆ. ದೈಹಿಕ ಶಿಕ್ಷಕರು, ಕಲೆ, ಸಂಗೀತ ಶಿಕ್ಷಕರ ಕೊರತೆಯನ್ನು ಹಂತ ಹಂತವಾಗಿ ನೀಗಿಸಲಾಗುವುದು ಎಂದು ತಿಳಿಸಿದ್ದಾರೆ.