ಬೆಂಗಳೂರು : ರಾಜ್ಯ ಸರ್ಕಾರವು ಭೂರಹಿತ ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಭೂಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿಯ ಭೂರಹಿತ ಕೃಷಿ ಕಾರ್ಮಿಕ ಕುಟುಂಬದ ಮಹಿಳೆಯರಿಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಭೂ-ಒಡೆತನ ಯೋಜನೆಯು ನಿಗಮದ ಒಂದು ಪ್ರತಿಷ್ಟಿತ ಯೋಜನೆಯಾಗಿದ್ದು, ಪರಿಶಿಷ್ಟ ಜಾತಿಯ ಭೂರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಮಾತ್ರ ಈ ಯೋಜನೆಯಡಿ ಸೌಲಭ್ಯವನ್ನು ನೀಡಲಾಗುತ್ತಿದೆ.
04 ಜಿಲ್ಲೆಗಳಿಗೆ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ) ಸರ್ಕಾರದ ಆದೇಶ ಸಂಖ್ಯೆ: ಸಕಇ:137:ಎಸ್ ಡಿಸಿ:2018, ಬೆಂಗಳೂರು ದಿನಾಂಕ: 12.09.2018ರಂತೆ ಘಟಕ ವೆಚ್ಚ ರೂ. 25 ಲಕ್ಷಗಳಿದ್ದು, ಘಟಕ ವೆಚ್ಚದಲ್ಲಿ ಶೇ.50 ಭಾಗ ಸಹಾಯಧನ ಹಾಗೂ ಶೇ.50 ಭಾಗ ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ನೀಡಲಾಗುವುದು.
ಘಟಕ ವೆಚ್ಚದ ಮಿತಿಯಲ್ಲಿ ಖುಷ್ಕಿ ಅಥವಾ ತರಿ / ಭಾಗಾಯ್ತು ಜಮೀನನ್ನು ಕೃಷಿ ಉದ್ದೇಶಕ್ಕಾಗಿ ಖರೀದಿಸಿ ಕೊಡಲಾಗುವುದು. ಘಟಕ ವೆಚ್ಚದ ಶೇ.50 ರಷ್ಟು ಸಹಾಯಧನ ಹಾಗೂ ಶೇ.50 ರಷ್ಟು ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ನೀಡಲಾಗುವುದು. ಫಲಾನುಭವಿಯು ಸಾಲದ ಹಣವನ್ನು 10 ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕು. ಇದಕ್ಕೆ ಬಡ್ಡಿದರ ಶೇ.6 ರಷ್ಟು ವಿಧಿಸಲಾಗುತ್ತದೆ.
ಜಮೀನನ್ನು ಮಾರಾಟ ಮಾಡುವವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಸೇರಿದವರಾಗಿರಬಾರದು. ಫಲಾನುಭವಿಯು ವಾಸಿಸುತ್ತಿರುವ ಸ್ಥಳದಿಂದ ಗರಿಷ್ಠ 10 ಕಿ.ಮೀ ವ್ಯಾಪ್ತಿಯೊಳಗೆ ಜಮೀನನ್ನು ಫಲಾನುಭವಿಗೆ ಖರೀದಿಸಿ ಕೊಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯು ದರ ನಿಗದಿಪಡಿಸುತ್ತದೆ.
ಈ ಯೋಜನೆಯಡಿ ಫಲಾಪೇಕ್ಷಿಗಳಿಗೆ ಸೌಲಭ್ಯ ಕಲ್ಪಿಸಲು ವಿಧಾನಸಭಾ ಕ್ಷೇತ್ರವಾರು ಪರಿಶಿಷ್ಟ ಜಾತಿಯ ಜನಸಂಖ್ಯೆ ಆಧಾರದ ಮೇಲೆ ಮತ್ತು ಹಿಂದಿನ ವರ್ಷಗಳಲ್ಲಿ ಹೆಚ್ಚಿನ ಪ್ರಸ್ತಾವನೆಗಳು ಬಂದಿರುವ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾವಾರು ಗುರಿಯನ್ನು ನಿಗದಿಪಡಿಸಲಾಗಿದೆ.
2023-24ನೇ ಸಾಲಿನ ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದ್ದು, ಅರ್ಹ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಪರಿಶಿಷ್ಟ ಜಾತಿ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಸಮುದಾಯದವರು ಅರ್ಜಿ ಸಲ್ಲಿಸಬಹುದು.