ಬೆಂಗಳೂರು : ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ ಆರು ತಿಂಗಳಿಂದ ಮೂರು ವರ್ಷದ ಶಿಶುಗಳ ಪಾಲನೆ ಮತ್ತು ಪೋಷಣೆಗೆ ರಾಜ್ಯ ಸರ್ಕಾರ ‘ಕೂಸಿನ ಮನೆ’ (ಶಿಶು ಪಾಲನಾ ಕೇಂದ್ರ) ಯೋಜನೆ ಜಾರಿಗೆ ತಂದಿದ್ದು, ಅಕ್ಟೋಬರ್ 2 ಗಾಂಧಿ ಜಯಂತಿಯಂದು ಚಾಲನೆ ನೀಡುವ ಸಾಧ್ಯತೆ ಇದೆ.
ರಾಜ್ಯದಾದ್ಯಂತ 40 ಕೋಟಿ ರೂ. ವೆಚ್ಚದಲ್ಲಿ 4,000 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಗೆ ತೆರೆಯಲಾಗುತ್ತಿರುವ “ಕೂಸಿನ ಮನೆ’ ಶಿಶುಪಾಲನಾ ಕೇಂದ್ರಗಳನ್ನು ಲೋಕಾರ್ಪಣೆಗೊಳಿಸಲು ಸರ್ಕಾರ ನಿರ್ಧರಿಸಿದೆ.
ರಾಜ್ಯ ಸರ್ಕಾರ ‘ಕೂಸಿನ ಮನೆ’ ತೆರೆಯಲು 40 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದು, ಶಿಶುಪಾಲನಾ ಕೇಂದ್ರ ನಡೆಸಲು ಅಗತ್ಯವಿರುವ ಕಟ್ಟಡ, ಇತರ ಮೂಲ ಸೌಲಭ್ಯಗಳನ್ನು ಹಾಗೂ ಅನುದಾನವನ್ನು ಗ್ರಾಮ ಪಂಚಾಯಿತಿಗಳು ತಮ್ಮ ಸಂಪನ್ಮೂಲದಲ್ಲಿಯೇ ಹೊಂದಿಸಬೇಕಾಗುತ್ತದೆ.
ಪ್ರಸಕ್ತ 2023-24ರ ಅಯವ್ಯಯ ಭಾಷಣದಲ್ಲಿನ ಘೋಷಣೆಯಂತೆ ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಕೂಲಿ ಕಾರ್ಮಿಕರ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು “ಕೂಸಿನ ಮನೆ” ಶಿಶುವಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. “ಕೂಸಿನ ಮನೆ’ ಕೆಂದ್ರಗಳು ಸ್ಥಳೀಯ ಕಾರ್ಮಿಕರ ಅನುಕೂಲಕ್ಕೆ ತಕ್ಕಂತೆ ದಿನದಲ್ಲಿ 6 ಗಂಟೆ 30 ನಿಮಿಷಗಳ ಕಾಲ ಕಾರ್ಯನಿರ್ವಹಿಸುತ್ತವೆ. ಗ್ರಾಮ ಪಂಚಾಯಿತಿಗಳೇ ಕೇಂದ್ರದ ಕಾರ್ಯನಿರ್ವಹಿಸುವ ಸಮಯವನ್ನು ನಿರ್ಧರಿಸಲಿದೆ.
ಪ್ರತಿ ಕೇಂದ್ರದಲ್ಲಿ 10 ಜನ ಕೇರ್ ಟೇಕರ್ಸ್:
4000 ಶಿಶು ಪಾಲನಾ ಕೇಂದ್ರಗಳಿಗೆ ಪ್ರತಿ ಕೇಂದ್ರಕ್ಕೆ ನರೇಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ 10 ಜನ ಕೇರ್ ಟೇಕರ್ಸ್ಗಳನ್ನು (ಮಕ್ಕಳ ಆರೈಕೆದಾರರು) ಇರಲಿದ್ದಾರೆ. ಇವರಿಗೆ ಮೊಬೈಲ್ ಕ್ರಶ್ ದೆಹಲಿ ಸಂಸ್ಥೆಯ ಸಹಕಾರದಿಂದ ತರಬೇತಿ ನೀಡಲಾಗುವುದು. ಇದರಿಂದ 40,000 ನರೇಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಕ್ಕಳ ಆರೈಕೆಯ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಾಗುತ್ತಿದೆ.
ಪ್ರತಿ ಕೇಂದ್ರದಲ್ಲಿ 25 ಜನ ಮಕ್ಕಳಿಗೆ ಅವಕಾಶ:
ಪ್ರತಿ ‘ಕೂಸಿನ ಮನೆ’ ಕೇಂದ್ರದಲ್ಲಿ ನರೇಗಾ ಕ್ರಿಯಾಶೀಲ ಉದ್ಯೋಗ ಹಾರ್ಡ್ ಹೊಂದಿರುವ ಕುಟುಂಬದ 3 ವರ್ಷದೊಳಗಿನ ಗರಿಷ್ಠ 25 ಮಕ್ಕಳನ್ನು ದಾಖಲೆ ಮಾಡಿಕೊಳ್ಳಲು ಅವಕಾಶ ಇರಲಿದೆ.