ಬೆಂಗಳೂರು : ಆಸ್ತಿ ಮಾರಾಟಕ್ಕಾಗಿ ತುರ್ತಾಗಿ ಇ-ಖಾತಾ ಅಗತ್ಯವಿರುವವರಿಗಾಗಿ ವಾರ್ಡ್ಗಳಲ್ಲಿ ಪ್ರತ್ಯೇಕ ಸಹಾಯ ಕೇಂದ್ರ ತೆರೆಯಲಾಗಿದೆ. ಕಂದಾಯ ಅಧಿಕಾರಿಗಳಿಗೆ ಎಲ್ಲ ರೀತಿಯ ದಾಖಲೆಗಳನ್ನು ನೀಡಿ ಇ-ಖಾತಾ ಪಡೆದುಕೊಳ್ಳಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಕಾವೇರಿ-2.0 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶ ಸಂಯೋಜನೆ ಮಾಡಲಾಗಿದ್ದು, ಅ. 7ರಿಂದ ರಾಜ್ಯಾದ್ಯಂತ ಇ-ಆಸ್ತಿ ಖಾತಾ ತಂತ್ರಾಂಶ ವ್ಯವಸ್ಥೆ ಜಾರಿಯಾಗಿದೆ. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲು ಸಮ್ಮತಿ ನೀಡಿದೆ. ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಲು ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2 ತಂತ್ರಾಂಶದೊಂದಿಗೆ ದಿ:23/09/2024ರ ಸರ್ಕಾರದ ಆದೇಶದಂತೆ ಜಾರಿಯಾಗಿರುತ್ತದೆ.
2024ರ ಅಕ್ಟೋಬರ್ 07 ರಿಂದ ಎಲ್ಲಾ ಉಪನೋಂದಣಿ ಕಚೇರಿಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ತಂತ್ರಾಂಶದಿಂದಲೇ ಇ-ಖಾತಾ ಪಡೆಯಬೇಕೆಂದು ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.