ಬೆಂಗಳೂರು: ರಾಜ್ಯ ಸರ್ಕಾರವು ಮದ್ಯದ ಮೇಲಿನ ಅಬಕಾರಿ ತೆರಿಗೆ ಹೆಚ್ಚಳ ಮಾಡಿಲ್ಲಸರ್ಕಾರದಿಂದ ಮದ್ಯದ ದರ ಹೆಚ್ಚಳ ಮಾಡಿಲ್ಲ. ಈ ಕುರಿತಾಗಿ ಯಾವುದೇ ಅಧಿಕೃತ ಆದೇಶ ಕೂಡ ಹೊರಡಿಸಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯದ ದರ ಹೆಚ್ಚಳದ ಬಗ್ಗೆ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ. ಬಾರ್ಗಳು ಅಕ್ರಮವಾಗಿ ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತಿದ್ದರೆ ರಿಯಾಲಿಟಿ ಚೆಕ್ ಮಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಒಂದು ವೇಳೆ ಮದ್ಯದ ದರ ಹೆಚ್ಚಳ ಮಾಡಿದರೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಇದುವರೆಗೂ ನನಗೆ ತಿಳಿದಿರುವಂತೆ ಅಬಕಾರಿ ಇಲಾಖೆಯಿಂದ ಮದ್ಯದ ಹೆಚ್ಚಳ ಮಾಡಿಲ್ಲ. ಈ ಬಗ್ಗೆ ಪರಿಶೀಲಿಸಿ ತಿಳಿಸುತ್ತೇವೆ ಎಂದ ಅವರು, ಕಳೆದ ಒಂದು ವಾರದಿಂದ ಬಿಯರ್ ದರ 20 ರೂಪಾಯಿ ಹೆಚ್ಚಳವಾಗಿದೆ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಮದ್ಯದ ದರ ಹೆಚ್ಚಳ ಮಾಡುವ ಬಗ್ಗೆ ಯಾವುದೇ ಪ್ರಸ್ತಾವನೆಯೂ ನಮ್ಮ ಮುಂದೆ ಇಲ್ಲ. ಹೆಚ್ಚಳ ಮಾಡಿದ್ದರೆ ನಾವೇ ಮಾಹಿತಿ ನೀಡುತ್ತಿದ್ದೆವು ಎಂದು ಎಲ್ಲಾ ಗೊಂದಲಕ್ಕೆ ತೆರೆ ಎಳೆದರು. ಈ ಮೂಲಕ ಮದ್ಯ ಪ್ರಿಯರಿಗೆ ನೆಮ್ಮದಿ ಸುದ್ದಿ ಸಿಕ್ಕಂತಾಗಿದೆ.