ಬೆಂಗಳೂರು: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಬಿ ಎಂ ಆರ್ ಸಿ ಎಲ್ ಗುಡ್ ನ್ಯೂಸ್ ನೀಡಿದೆ. ಮುಂದಿನ ತಿಂಗಳ ಅಂತ್ಯದಿಂದ ಕ್ಯೂ ಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆ ಜಾರಿಗೆ ಬರಲಿದೆ.
ಈಗಾಗಲೇ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಿ ಎಂ ಆರ್ ಸಿ ಎಲ್ ಹಲವು ಬದಲಾವಣೆಗಳನ್ನು ತಂದಿದ್ದು, ಟೋಕನ್, ಸ್ಮಾರ್ಟ್ ಕಾರ್ಡ್, ಪಾಸ್ ವ್ಯವಸ್ಥೆ ಜಾರಿಗೊಳಿಸಿದೆ. ಇದೀಗ ಇನ್ನೊಂದು ಹೊಸ ಮಾದರಿಯ ವ್ಯವಸ್ಥೆ ಕ್ಯೂ ಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆ ಜಾರಿಗೆ ತಂದಿದೆ.
ಮೆಟ್ರೋ ಟಿಕೆಟ್ ಗಾಗಿ ಪ್ರಯಾಣಿಕರು ಉದ್ದದ ಸಾಲಿನಲ್ಲಿ ನಿಲ್ಲಬೇಕಿತ್ತು. ಆದರೆ ಇನ್ಮುಂದೆ ಮೊಬೈಲ್ ಮೂಲಕವೇ ಟಿಕೆಟ್ ಖರಿದಿಸಬಹುದಾಗಿದೆ. ಕ್ಯೂ ಆರ್ ಕೋಡ್ ವ್ಯವಸ್ಥೆಯಿಂದ ಚಿಲ್ಲರೆ ನೀಡುವ ಸಮಸ್ಯೆಯೂ ದೂರವಾಗಲಿದೆ.
ಪ್ರಯಾಣಿಕರು ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಪೇಟಿಎಂ, ಮೆಟ್ರೋ ಯಾತ್ರಾ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ ಪ್ರಯಾಣಿಸುವ ಮಾರ್ಗ ಹಾಗೂ ಎಷ್ಟು ಸಂಖ್ಯೆ ಜನರು ಎಂಬುದನ್ನು ನಮೂದಿಸಬೇಕು. ಬಳಿಕ ಅಪ್ಲಿಕೇಷನ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಪ್ರಯಾಣದ ಮೊತ್ತ ತಕ್ಷಣ ಬಿ ಎಂ ಆರ್ ಸಿ ಎಲ್ ಗೆ ಜಮಾ ಆಗುತ್ತದೆ. ಮೆಟ್ರೋ ಗೇಟ್ ನಲ್ಲಿರುವ ಸ್ಕ್ಯಾನರ್ ಗೆ ಡೌನ್ ಲೋಡ್ ಮಾಡಿರುವ ಕ್ಯೂ ಆರ್ ಕೋಡ್ ತೋರಿಸಿಯೂ ನಿಲ್ದಾಣದೊಳಗೆ ಪ್ರವೇಶಿಸಬಹುದು.