ಕಲಬುರಗಿ : ನರೇಗಾ ಕೂಲಿ ಕಾರ್ಮಿಕರ ಕೆಲಸದ ದಿನ 100 ರಿಂದ 150ಕ್ಕೆ ಹೆಚ್ಚಿಸಲಾಗುವುದು. ಬರಗಾಲ ಘೋಷಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗುತ್ತದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ವಿಭಾಗೀಯ ಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ 161 ತೀವ್ರ ಮತ್ತು 34 ಸಾಧಾರಣ ಹೀಗೆ ಒಟ್ಟು 195 ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಿದ ಹಿನ್ನೆಲೆಯಲ್ಲಿ ಬರಗಾಲ ಪರಿಸ್ಥಿತಿ ಅರಿಯಲು ಕೇಂದ್ರ ಸರ್ಕಾರವು ಬರ ಅಧ್ಯಯನ ತಂಡಗಳನ್ನು ಕಳುಹಿಸುವುದಾಗಿ ಮಾಹಿತಿ ನೀಡಿದೆ. ಇದೇ ಅಕ್ಟೋಬರ್ 10 ರೊಳಗೆ ತಂಡಗಳು ಆಗಮಿಸಲಿವೆ ಎಂದು ಕೃಷಿ ಸಚಿವರು ತಿಳಿಸಿದರು.
ಒಂದೆಡೆ ಅತಿವೃಷ್ಟಿ ಮತ್ತೊಂದೆಡೆ ಅನಾವೃಷ್ಟಿ ಪರಿಸ್ಥಿತಿವಿದೆ. ಹೆಚ್ಚಿನ ಪ್ರಮಾಣದಲ್ಲಿ ಬರಗಾಲವಿದೆ. ಬೆಳೆ ಹಾನಿ ಸಮೀಕ್ಷೆ ನಡೆದಿದ್ದು, ಈಗಾಗಲೇ ಶೇ. 95ರಷ್ಟು ಬೆಳೆ ಹಾನಿ ಸಮೀಕ್ಷೆಯಾಗಿದೆ. ತಂಡಗಳು ಆಗಮಿಸುವ ಹೊತ್ತಿಗೆ ಸಮೀಕ್ಷೆ ಪೂರ್ಣಗೊಂಡು ವರದಿ ಅಂತಿಮಗೊಳ್ಳಲಿದೆ. ಪ್ರಾಥಮಿಕ ವರದಿ ಪ್ರಕಾರ ಈಗಾಗಲೇ 40 ಲಕ್ಷ ಹೆಕ್ಟೇರ್ ದಲ್ಲಿ ಸುಮಾರು 28 ಸಾವಿರ ಕೋ.ರೂ ಹಾನಿ ಅಂದಾಜಿಸಲಾಗಿದೆ. 4,000 ಕೋಟಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ವಿವರಣೆ ನೀಡಿದರು.
ನರೇಗಾ ಕೂಲಿ ಕಾರ್ಮಿಕರ ಕೆಲಸದ ದಿನ 100 ರಿಂದ 150ಕ್ಕೆ ಹೆಚ್ಚಿಸಲಾಗುವುದು. ಬರಗಾಲ ಘೋಷಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗುತ್ತದೆ. ಪ್ರತಿ ವಾರ ಕಮಿಟಿ ಸಭೆ ಕರೆದು ಪರಿಹಾರ ಕಾರ್ಯ ಉಸ್ತುವಾರಿ ನೋಡಿಕೊಳ್ಳಲಿದೆ ಎಂದ ಅವರು ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಪರಿಣಾಮ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದರು.