![](https://kannadadunia.com/wp-content/uploads/2023/06/george-1509070057-300x181-1.jpg)
ಶಿವಮೊಗ್ಗ : ಉದ್ಯೋಗಾಕಾಂಕ್ಷಿಗಳಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸಿಹಿಸುದ್ದಿ ನೀಡಿದ್ದು, ಆರು ಸಾವಿರ ಲೈನ್ ಮನ್ ಗಳ ನೇಮಕ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಹಲವಡೆ ಲೈನ್ ಮನ್ ಗಳ ಕೊರತೆ ಇದೆ. ಹೀಗಾಗಿ ಆರು ಸಾವಿರ ಲೈನ್ ಮನ್ ಗಳ ನೇಮಕಕ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ವಿದ್ಯುತ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 10,000ಸಿಬ್ಬಂಧಿಗಳಿಗೆ ತರಬೇತಿ, ಯಂತ್ರೋಪಕರಣಗಳ ನಿರ್ವಹಣೆ ಬಗ್ಗೆ ಕಾರ್ಯಾಗಾರ ನಡೆಸಲಾಗುತ್ತಿದೆ. ಆಕಸ್ಮಿಕ ಅವಘಡಗಳಿಗೆ ಸೂಕ್ತ ಪರಿಹಾರ ಒದಗಿಸಲು ನಿಧಿ ಸ್ಥಾಪಿಸಿ, ಸಂತ್ರಸ್ಥ ಕುಟುಂಬಗಳಿಗೆ ಉತ್ತಮ ಮೊತ್ತವನ್ನು ನೀಡಲು ಉದ್ದೇಶಿಸಲಾಗಿದೆ. ಘಟಕಗಳನ್ನು ಸಿಬ್ಬಂಧಿ ರಹಿತವಾಗಿ ನಿರ್ವಹಿಸಲು ಉದ್ದೇಶಿಸಿದೆ. ಸಿಬ್ಬಂಧಿಗೆ ವೇತನ, ಭತ್ಯೆ. ಸಮವಸ್ತ್ರ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ರೈತರ ಪಂಪ್‍ಸೆಟ್‍ಗಳಿಗೆ ನಿರಂತರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಸದುದ್ದೇಶದಿಂದ ಅಕ್ರಮ ವಿದ್ಯುತ್ ಬಳಕೆಯನ್ನು ಸಕ್ರಮಗೊಳಿಸುವ, ಹಾಗೂ ಅಕ್ರಮವನ್ನು ನಿಯಂತ್ರಿಸುವ ಸಲುವಾಗಿ ವಿಶೇಷವಾಗಿ ಗಮನಹರಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಟ್ರಾನ್ಸ್‍ಫಾರ್ಮರ್‍ಗಳ ಬದಲಾವಣೆ, ದುರಸ್ತಿಗೆ ಕ್ರಮ ವಹಿಸಲಾಗಿದೆ. ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್ ಸರಬರಾಜುಗೊಳಿಸುವ ಖಾಸಗಿ ವ್ಯಕ್ತಿ/ಸಂಸ್ಥೆಗಳೊಂದಿಗೆ ಈಗಾಗಲೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.