![](https://kannadadunia.com/wp-content/uploads/2023/06/priyank-kharge1654339617.jpg)
ಬೆಂಗಳೂರು : ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸರ್ಕಾರದ 46 ಇಲಾಖೆಗಳಲ್ಲಿ ಖಾಲಿ ಇರುವ 14,771 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸಚಿವ ಸಂಪುಟ ಉಪ ಸಮಿತಿಯಲ್ಲಿ ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ತೀಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ 371 (J) ಅಡಿ ರಾಜ್ಯ ಸರ್ಕಾರದ 46 ಇಲಾಖೆಗಳಲ್ಲಿ ಖಾಲಿ ಇರುವ 14,771 ಹುದ್ದೆಗಳ ನೇಮಕಾತಿ ಹಾಗೂ ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಹುದ್ದೆಗಳಲ್ಲಿ ಶೇ. 8ರಷ್ಟು ಮೀಸಲಾತಿಯ ಅನುಸಾರ 8,278 ಹುದ್ದೆಗಳಿಗೆ ಮುಂಬಡ್ತಿ ನೀಡಿ ಸರ್ಕಾರದ ವಿವಿಧ ಇಲಾಖೆಗಳು ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸಂಪುಟ ಉಪ ಸಮಿತಿಯಲ್ಲಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಂವಿಧಾನದ ಅನುಚ್ಛೇದ 371 (J) ಅಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಪ್ರಯುಕ್ತ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಕೆಳಗಿನ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ 371(J) ಪ್ರಕಾರ ರಾಜ್ಯ ವೃಂದದಲ್ಲಿ 8% ರಷ್ಟು ಹುದ್ದೆಗಳನ್ನು ನೀಡುವ ಬಗ್ಗೆ ಜೇಷ್ಟತಾ ಪಟ್ಟಿಗಳನ್ನು ಪ್ರತ್ಯೇಕವಾಗಿ ಪ್ರಕಟಿಸದೇ ಒಂದೇ ಪಟ್ಟಿ ಪ್ರಕಟಿಸಿ ಜೇಷ್ಟತಾ ಪಟ್ಟಿಯಲ್ಲಿ ಅಧಿಕಾರಿ/ನೌಕರರ ಹೆಸರಿನ ಮುಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ನಮೂದಿಸುವ ಮಾದರಿಯಲ್ಲಿಯೇ 371(J) SC , 371(J) ST , 371(J) ಸಾಮಾನ್ಯ, 371(J) ಮಹಿಳೆ ಎಂದು ನಮೂದಿಸಲು ಸೂಕ್ತ ಆದೇಶ ಹೊರಡಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.