ಬೆಂಗಳೂರು : ರಾಜ್ಯ ಸರ್ಕಾರ ಫೆಬ್ರವರಿಯಲ್ಲಿ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ ಮಾಡಲು ನಿರ್ಧರಿಸಿದೆ ಎಂದು ಸಚಿವ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಈಗ ಯುವನಿಧಿ ಯೋಜನೆ ಜಾರಿಗೊಳಿಸುತ್ತಿದ್ದೇವೆ. ನಂತರ ನಿರುದ್ಯೋಗ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದಿಂದಲೇ ಬೃಹತ್ ಉದ್ಯೋಗ ಮೇಳ ನಡೆಸಲಾಗುತ್ತದೆ ಎಂದರು.
ಸ್ವಾಮಿ ವಿವೇಕಾನಂದರ ಜಯಂತಿ-ರಾಷ್ಟ್ರೀಯ ಯುವದಿನವಾದ ಜ.12 ರಂದು ಇಂದು ರಾಜ್ಯ ಸರ್ಕಾರದ 5 ನೇ ಗ್ಯಾರಂಟಿಯಾದ ‘ಯುವನಿಧಿ’ ಯೋಜನೆಗೆ ಶಿವಮೊಗ್ಗದ ಫ್ರೀಡಂ ಪಾರ್ಕಿನಲ್ಲಿ ಸಿದ್ದರಾಮಯ್ಯನವರು ಚಾಲನೆ ನೀಡುತ್ತಿದ್ದಾರೆ.
ಯುವನಿಧಿಗೆ 61,700 ಅರ್ಜಿ ಸಲ್ಲಿಕೆ
2023 ರಲ್ಲಿ ಪದವಿ/ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯಡಿ 2 ವರ್ಷಗಳವರೆಗೆ ನಿರುದ್ಯೊಗ ಭತ್ಯೆ ನೀಡಲಾಗುವುದು. ಹಾಗೂ ಸ್ಕಿಲ್ ಕನೆಕ್ಟ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡು ತರಬೇತಿಯನ್ನು ನೀಡಲಾಗುವುದು. ನಿರುದ್ಯೋಗ ಬಹಳ ದೊಡ್ಡ ಸಮಸ್ಯೆಯಾಗಿದ್ದು ಉದ್ಯೋಗವನ್ನು ಒದಗಿಸಲು ಸಹಕರಿಸುವುದು ಮತ್ತು ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ಪ್ರಸ್ತುತ 61,700 ಪದವಿ/ಡಿಪ್ಲೊಮಾ ಹೊಂದಿದ ಅಭ್ಯರ್ಥಿಗಳು ಈ ಯೋಜನೆಯಡಿ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 2022-23 ರಲ್ಲಿ ಒಟ್ಟು 5.29 ಲಕ್ಷ ವಿದ್ಯಾರ್ಥಿಗಳು ಪದವಿ/ಡಿಪ್ಲೊಮಾ ಮುಗಿಸಿದ್ದಾರೆ. ವಿದ್ಯಾಭ್ಯಾಸ ಮುಗಿದು ಆರು ತಿಂಗಳಾದರೂ ಉದ್ಯೋಗ ಸಿಗದವರು ಫಲಾನುಭವಿಗಳಾಗಲು ಅರ್ಹರಿದ್ದಾರೆ. ನೋಂದಣಿ ಪ್ರಕ್ರಿಯೆ ಆನ್ಲೈನ್ನಲ್ಲಿ ಉಚಿತ ಮತ್ತು ಸರಳವಾಗಿದೆ ಎಂದರು.