ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಗಳನ್ನು ಬ್ರಿಟನ್ ಅನುಮೋದನೆಗೊಂಡ ಕೋವಿಡ್ ಲಸಿಕೆಗಳ ಪಟ್ಟಿಗೆ ಸೇರಿಸಿದೆ. ಇದರಿಂದ ಬ್ರಿಟನ್ಗೆ ತೆರಳಲಾಗದೇ ಸಂಕಷ್ಟ ಅನುಭವಿಸುತ್ತಿದ್ದ ಸಾವಿರಾರು ಮಂದಿ ಭಾರತೀಯರು ನಿಟ್ಟುಸಿರು ಬಿಡುವಂತಾಗಿದೆ.
ಬ್ರಿಟನ್ನ ಈ ಹೊಸ ಘೋಷಣೆಯಿಂದಾಗಿ ಕೋವ್ಯಾಕ್ಸಿನ್ ಲಸಿಕೆಯ 2 ಡೋಸ್ಗಳನ್ನು ಪಡೆದು ನವೆಂಬರ್ 22ರ ಬಳಿಕ ಬ್ರಿಟನ್ಗೆ ಪ್ರಯಾಣಿಸುವವರು ಇಂಗ್ಲೆಂಡ್ನಲ್ಲಿ ಐಸೋಲೇಷನ್ಗೆ ಒಳಗಾಗುವ ಅಗತ್ಯ ಇರುವುದಿಲ್ಲ.
ವಿಶ್ವ ಆರೋಗ್ಯ ಸಂಸ್ಥೆಯು ಕೋವ್ಯಾಕ್ಸಿನ್ ಲಸಿಕೆಗಳ ಬಳಕೆಗೆ ಅನುಮೋದನೆ ನೀಡಿದ ಬೆನ್ನಲ್ಲೇ ಬ್ರಿಟನ್ ಕೂಡ ಈ ಸಿಹಿಸುದ್ದಿಯನ್ನು ನೀಡಿದೆ. ಕಳೆದ ತಿಂಗಳಷ್ಟೇ ಆಕ್ಸ್ಫರ್ಡ್-ಆಸ್ಟ್ರೆಜೆನಿಕಾ ಜಂಟಿಯಾಗಿ ತಯಾರಿಸಿದ ಕೋವಿಶೀಲ್ಡ್ಗೆ ಬ್ರಿಟನ್ ಅನುಮೋದನೆ ನೀಡಿತ್ತು. ಇದೀಗ ಕೋವ್ಯಾಕ್ಸಿನ್ಗೂ ಅನುಮೋದನೆ ದೊರಕಿದ್ದು ಭಾರತೀಯರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಭಾರತದ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್, ಬ್ರಿಟನ್ಗೆ ಪ್ರಯಾಣಿಸಲು ಬಯಸುತ್ತಿದ್ದ ಭಾರತೀಯ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ..! ನವೆಂಬರ್ 22ರಿಂದ ಡಬ್ಲುಹೆಚ್ಓನಿಂದ ಅನುಮೋದನೆ ಪಡೆದ ಕೋವ್ಯಾಕ್ಸಿನ್ ಸೇರಿದಂತೆ ವಿವಿಧ ಯಾವುದೇ ಲಸಿಕೆಗಳನ್ನು ಸ್ವೀಕರಿಸಿದವರು ಬ್ರಿಟನ್ನಲ್ಲಿ ಐಸೋಲೇಷನ್ಗೆ ಒಳಗಾಗುವ ಅಗತ್ಯವಿಲ್ಲ. ಕೋವಿಶೀಲ್ಡ್ ಜೊತೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಎರಡು ಡೋಸ್ ಪಡೆದವರೂ ಸಹ ಇನ್ಮುಂದೆ ಐಸೋಲೇಷನ್ನಿಂದ ಮುಕ್ತಿ ಪಡೆಯಲಿದ್ದಾರೆ ಎಂದು ಬರೆದಿದ್ದಾರೆ.