ಬೆಂಗಳೂರು: ನಗರಪ್ರದೇಶದ ವಸತಿ ರಹಿತ ಬಡಜನತೆಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ನಗರಪ್ರದೇಶಗಳಲ್ಲಿ 2.32 ಲಕ್ಷಮನೆಗಳನ್ನು ಬಡವರಿಗೆ ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಬಡವರಿಗೆ ಸೂರು ಕಲ್ಪಿಸಲು 2015ರಲ್ಲಿ ರೂಪಿಸಿದ ಯೋಜನೆಯಡಿ ತಲಾ ರೂ.7.50 ಲಕ್ಷ ವೆಚ್ಚದಲ್ಲಿ ಮನೆಗಳ ಸಮುಚ್ಚಯಯವನ್ನು ಫಲಾನುಭವಿಗಳಿಗೆ ನಿರ್ಮಿಸಿಕೊಡುವುದು ಸರ್ಕಾರದ ಕಾರ್ಯಕ್ರಮವಾಗಿತ್ತು. ಇಲ್ಲಿ ಸರ್ಕಾರ 3 ಲಕ್ಷ ರೂ. ಸಬ್ಸಿಡಿ ನೀಡಲಿದ್ದು, ಉಳಿದ ಹಣವನ್ನು ಫಲಾನುಭವಿ ಪಾವತಿಸಬೇಕಾಗಿತ್ತು. ಆದರೆ ಅವರಿಗೆ ಬ್ಯಾಂಕ್ ಸಾಲ ಲಭ್ಯವಾಗದೆ ಇದ್ದುದ್ದರಿಂದ ಅವರ ಪಾಲಿನ ಹಣ ಗುತ್ತಿಗೆದಾರರ ಕೈಸೇರದೆ 2.32 ಲಕ್ಷ ಮನೆಗಳ ಅರ್ಧಂಬರ್ಧ ನಿರ್ಮಾಣವಾಗಿ ನಿಂತಿದ್ದವು. ಈ ಮನೆಗಳ ಬಾಕಿ ಹಣವನ್ನು ಸರ್ಕಾರವೇ ಪಾವತಿಸಿ, ಅರ್ಹಕುಟುಂಬಗಳಿಗೆ ಉಚಿತವಾಗಿ ಸೂರು ಒದಗಿಸಲಿದೆ ಎಂದು ಹೇಳಿದ್ದಾರೆ.