
ರಾಜ್ಯ ಕಾಂಗ್ರೆಸ್ ಸರ್ಕಾರ 2020 – 21ರ ಬಳಿಕ ಸ್ಥಗಿತಗೊಂಡಿದ್ದ ‘ಶುಚಿ’ ಯೋಜನೆಗೆ ಮತ್ತೆ ಚಾಲನೆ ನೀಡಿದ್ದು, ಈ ಯೋಜನೆ ಅಡಿ ಸರ್ಕಾರಿ, ಅನುದಾನಿತ ಶಾಲೆಗಳ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ ಕಿನ್ ವಿತರಣೆ ಮಾಡಲಾಗುತ್ತದೆ.
ಸ್ಯಾನಿಟರಿ ನ್ಯಾಪ್ ಕಿನ್ ವಿತರಣೆಗಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆಗಳನ್ನು ಪುನರಾರಂಭಿಸಲಾಗಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ರಾಜ್ಯದ 17.99 ಲಕ್ಷ ವಿದ್ಯಾರ್ಥಿನಿಯರು ‘ಶುಚಿ’ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.
ಈ ಯೋಜನೆ ಅಡಿ ಪ್ರತಿ ತಿಂಗಳು 10 ನ್ಯಾಪ್ ಕಿನ್ ಗಳನ್ನು ಹೊಂದಿರುವ ಒಂದು ಯೂನಿಟ್ ಅನ್ನು 11 ತಿಂಗಳುಗಳ ಕಾಲ ವಿದ್ಯಾರ್ಥಿನಿಯರಿಗೆ ಒದಗಿಸಲಾಗುತ್ತಿದ್ದು, ಆದರೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ಮೂರು ತಿಂಗಳು ಕಳೆದಿದೆ. ಹೀಗಾಗಿ ಉಳಿದಿರುವ ಎಂಟು ತಿಂಗಳಿಗೆ ಪ್ರತಿ ತಿಂಗಳು ತಲಾ ಹತ್ತು ನ್ಯಾಪ್ ಕಿನ್ ಹೊಂದಿರುವ ಒಟ್ಟು ಎಂಟು ಯೂನಿಟ್ ಗಳನ್ನು ಪೂರೈಸಲಾಗುತ್ತದೆ.